ಗುಜರಾತ್ ಮುಖ್ಯಮಂತ್ರಿ ಸ್ಥಾನಕ್ಕೆ ಆನಂದಿ ಬೆನ್ ರಾಜೀನಾಮೆ ನೀಡಿರುವ ಹಿನ್ನೆಲೆಯಲ್ಲಿ ಹೊಸ ಮುಖ್ಯಮಂತ್ರಿ ಆಯ್ಕೆಗೆ ಬಿಜೆಪಿಯಲ್ಲಿ ಕಸರತ್ತು ಪ್ರಾರಂಭವಾಗಿದೆ.
ಮುಖ್ಯಮಂತ್ರಿ ಆಯ್ಕೆ ಹೊಣೆಯನ್ನು ಪಕ್ಷದ ಸಂಸದೀಯ ಮಂಡಳಿಗೆ ನೀಡಲಾಗಿದೆ. ಗುಜರಾತ್ ಶಾಸಕರೊಂದಿಗೆ ಚರ್ಚಿಸಿ ಮುಖ್ಯಮಂತ್ರಿ ಆಯ್ಕೆ ಮಾಡಲಾಗುವುದು. ಈ ಸಂಬಂಧ ಗುಜರಾತ್‌ನ ಶಾಸಕರು ಆಗಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ನೇತೃತ್ವದಲ್ಲಿ ನಿಯೋಗವೊಂದನ್ನು ಗುಜರಾತ್‌ಗೆ ಕಳುಹಿಸಲಾಗುವುದು ಎಂದು ಪಕ್ಷದ ಕೇಂದ್ರ ಸಚಿವ ವೆಂಕಯ್ಯ ನಾಯ್ಡು ತಿಳಿಸಿದ್ದಾರೆ.
ಕೇಂದ್ರ ಸಚಿವ ಪುರುಷೋತ್ತಮ್ ರೂಪಾಲಾ, ಗುಜರಾತ್ ಸಂಪುಟ ದರ್ಜೆ ಸಚಿವ ನಿತಿನ್ ಪಟೇಲ್, ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ವಿಯ್ ರೂಪಾನಿ, ವಿಧಾನಸಭಾ ಸ್ಪೀಕರ್ ಗಣಪತಿ ವಾಸವ್ ಮುಖ್ಯಮಂತ್ರಿ ಪದವಿಯ ರೇಸ್‌ನಲ್ಲಿದ್ದಾರೆ.
ಪಟೇದಾರ್, ಚಳವಳಿ, ಸ್ಥಳೀಯ ಚುನಾವಣೆಗಳ ಸೋಲು, ಇತ್ತೀಚೀಗೆ ನಡೆದ ದಲಿತರ ಮೇಲಿನ ಹಲ್ಲೆ ಪ್ರಕರಣಗಳಿಂದ ಪಕ್ಷಕ್ಕಾಗಿರುವ ಹಿನ್ನಡೆಯನ್ನು ಮೆಟ್ಟಿ ನಿಂತು 2017ರ ಚುನಾವಣೆಯಲ್ಲಿ ಮತ್ತೆ ಅಧಿಕಾರಕ್ಕೇರುವ ಸವಾಲನ್ನು ಸಮರ್ಥವಾಗಿ ಎದುರಿಸುವ ನಾಯಕನ ಆಯ್ಕೆಯಾಗಬೇಕಿದೆ.
ಕಳೆದ ಎರಡು ದಶಕಗಳಿಂದ ರಾಜ್ಯದಲ್ಲಿ ಹೊಂದಿರುವ ಅಧಿಕಾರವನ್ನು ಯಾವುದೇ ಪರಿಸ್ಥಿತಿಯಲ್ಲೂ ಕಳೆದುಕೊಳ್ಳಬಾರದು ಎಂಬ ನಿಲುವು ಪ್ರಧಾನಿಯವರದಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.