ಬಿಜೆಪಿ ನಾಯಕತ್ವದಲ್ಲಿ ಪ್ರಧಾನಿ ಮೋದಿ ಧುರ್ಯೋದನನಂತಾಗಿದ್ದರೆ ವಿತ್ತಸಚಿವ ಅರುಣ್ ಜೇಟ್ಲಿ ದುಶ್ಯಾಸನರಂತೆ ಎಂದು ಬಿಜೆಪಿ ಮುಖಂಡ ಯಶ್ವಂತ್ ಸಿನ್ಹಾ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.
ದೇಶದ ಆರ್ಥಿಕತೆಗೆ ಮಾರಕವಾಗಿರುವ ಕೇಂದ್ರ ಸರಕಾರದ ಆರ್ಥಿಕ ನೀತಿಗಳ ಬಗ್ಗೆ ಸತ್ಯ ಹೇಳಿರುವ ನನ್ನ ವಿರುದ್ಧ ತಾಕತ್ತಿದ್ರೆ ಕ್ರಮ ಕೈಗೊಳ್ಳಲಿ ಎಂದು ಬಿಜೆಪಿ ಹೈಕಮಾಂಡ್‌ಗೆ ಸವಾಲ್ ಹಾಕಿದ್ದಾರೆ.
ಪ್ರಧಾನಿ ಮೋದಿ ವಿರುದ್ಧ ನೇರ ವಾಗ್ದಾಳಿ ನಡೆಸಿದ ಅವರು, ಪ್ರಧಾನಿ ಮೋದಿ ದೇಶದ ಆರ್ಥಿಕತೆಯ ಬಗ್ಗೆ ಒಂದು ಗಂಟೆ ಕಾಲ ಮಾತನಾಡಿದ್ದಾರೆ. ಆದರೆ, ಆರ್ಥಿಕ ಕುಸಿತದ ಬಗ್ಗೆ ಒಂದೇ ಒಂದು ಹೇಳಿಕೆ ನೀಡಿಲ್ಲ ಎಂದು ಕಿಡಿಕಾರಿದರು.
ಹಿರಿಯ ಕಾಂಗ್ರೆಸ್ ಮುಖಂಡ ಮನೀಶ್ ತಿವಾರಿ ಕಳೆದ ಒಂದು ವರ್ಷದಿಂದ ಬರೆದ ಲೇಖನಗಳ ಸಂಗ್ರಹದ ಶೀರ್ಷಿಕೆಯಿರುವ ಟೈಡಿಂಗ್ಸ್ ಆಫ್ ಟ್ರಬಲ್ಡ್ ಟೈಮ್ಸ್ ಉದ್ಘಾಟನಾ ಸಮಾರಂಭದಲ್ಲಿ ಸಿನ್ಹಾ ಮಾತನಾಡುತ್ತಿದ್ದರು.
ಒಂದೇ ವೇದಿಕೆಯಲ್ಲಿ ಕಾಂಗ್ರೆಸ್ ಮುಖಂಡ ಮನೀಷ್ ತಿವಾರಿ, ಬಿಜೆಪಿ ಮುಖಂಡ ಯಶ್ವಂತ್ ಸಿನ್ಹಾ ಮತ್ತು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಪ್ರಧಾನಿ ಮೋದಿ ಮತ್ತು ಅವರ ಆರ್ಥಿಕ ನೀತಿಗಳ ವಿರುದ್ಧ ವಾಗ್ದಾಳಿ ನಡೆಸಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿ, ಯಶ್ವಂತ್ ಸಿನ್ಹಾರನ್ನು ಮಹಾಭಾರತದ ಶಲ್ಯಗೆ ಹೋಲಿಸಿ ವಾಗ್ದಾಳಿ ನಡೆಸಿದ್ದರು. ಇದೀಗ ಸಿನ್ಹಾ, ಮೋದಿ ಮತ್ತು ಜೇಟ್ಲಿಯವರನ್ನು ದುರ್ಯೋಧನ ಮತ್ತು ದುಶ್ಯಾಸನನಿಗೆ ಹೋಲಿಸಿ ತಿರುಗೇಟು ನೀಡಿದ್ದಾರೆ.
ಮಹಾಭಾರತದಲ್ಲಿ ಶಲ್ಯ ಹೊರತುಪಡಿಸಿ ಇನ್ನೆರೆಡು ಪಾತ್ರಗಳಿವೆ. ಅವುಗಳೆಂದರೆ ಧುರ್ಯೋಧನ ಮತ್ತು ದುಶ್ಯಾಸನ ಪಾತ್ರಗಳು. ಅವರು ಯಾರು ಎಂದು ನಿಮಗೆ ಗೊತ್ತಿದೆಯೇ ? ನಾನು ಹೆಚ್ಚಿಗೆ ಹೇಳುವ ಅಗತ್ಯವಿಲ್ಲ ಎಂದು ಬಿಜೆಪಿ ಮುಖಂಡ ಯಶ್ವಂತ್ ಸಿನ್ಹಾ ಲೇವಡಿ ಮಾಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.