ನೋಟು ನಿಷೇಧ ಕುರಿತಂತೆ ಮೋದಿ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಬಿಜೆಪಿಯ ಮಿತ್ರಪಕ್ಷವಾದ ಶಿವಸೇನೆ, 10 ಸಾವಿರ ವರ್ಷಗಳ ಭಾರತದ ಇತಿಹಾಸದಲ್ಲಿ ಇಂತಹ ಕೆಟ್ಟ ಸರಕಾರ ಬಂದಿರಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದೆ.
ನೋಟು ನಿಷೇಧದಿಂದ ಕಪ್ಪುಹಣ ವಾಪಸ್ ಬರಲಿದೆ ಎನ್ನುವ ಬಿಜೆಪಿ ನಾಯಕರು ಮೂರ್ಖರ ಸಾಮ್ರಾಜ್ಯದಲ್ಲಿದ್ದಾರೆ ಎಂದು ಶಿವಸೇನೆ ತನ್ನದೇ ಮಿತ್ರಪಕ್ಷದ ವಿರುದ್ಧ ಕಿಡಿಕಾರಿದೆ.
ನವದೆಹಲಿಯ ಭಾರತೀಯ ರಿಸರ್ವ್ ಬ್ಯಾಂಕ್ ಕಚೇರಿಯ ಬಳಿ ನೋಟು ಬದಲಿಸಲು ವಿಫಲಳಾದ ಎರಡು ಮಕ್ಕಳ ತಾಯಿಯೊಬ್ಬಳು ಆಕ್ರೋಶದಿಂದ ಬಟ್ಟೆಗಳನ್ನು ಕಿತ್ತೆಸೆದು ನಗ್ನಳಾಗಿ ಪ್ರತಿಭಟನೆ ತೋರಿರುವುದು ನೋಡಿದಲ್ಲಿ ಸರಕಾರ ನಿರ್ಭಯದಂತಹ ಘಟನೆಗೆ ಪ್ರಾಯೋಜಕತ್ವ ನೀಡುತ್ತಿದೆ ಎನ್ನುವ ಭಾವನೆ ಉಂಟಾಗಿದೆ ಎಂದು ಬೇಸರ ವ್ಯಕ್ತಪಡಿಸಿದೆ.
ಮಹಾರಾಷ್ಟ್ರ ಮುಖ್ಯಮಂತ್ರಿ ನೋಟು ನಿಷೇಧದ ಪರವಾಗಿದ್ದಾರೆಯೋ ಅಥವಾ ಅಸಹಾಯಕ ಮಹಿಳೆಯ ಪರವಾಗಿದ್ದಾರೆಯೇ ಎನ್ನುವುದನ್ನು ಸ್ಪಷ್ಟಪಡಿಸಬೇಕು. ಒಂದು ವೇಳೆ, ಸರಕಾರ ಮಹಿಳೆಯ ಅಸಹಾಯಕತೆಯನ್ನು ಅರ್ಥ ಮಾಡಿಕೊಳ್ಳದಿದ್ದಲ್ಲಿ ಇಂತಹ ಕಿವುಡ ಸರಕಾರ 10 ಸಾವಿರ ವರ್ಷಗಳ ಹಿಂದೆಯೂ ಅಸ್ತಿತ್ವದಲ್ಲಿರಲಿಲ್ಲ ಎನ್ನಬೇಕಾಗುತ್ತದೆ ಎಂದು ಶಿವಸೇನೆ ತನ್ನ ಮುಖವಾಣಿ ಸಾಮ್ನಾದ ಸಂಪಾದಕೀಯದಲ್ಲಿ ಪ್ರಕಟಿಸಿದೆ.
ನವದೆಹಲಿಯ ರಸ್ತೆಯಲ್ಲಿ ಮಹಿಳೆಯೊಬ್ಬಳು ನಗ್ನಳಾಗಿ ಸರಕಾರವನ್ನು ಟೀಕಿಸುತ್ತಿದ್ದಾಳೆ ಎಂದರೆ, ಇದೊಂದು ಸರಕಾರವೇ ಪ್ರಾಯೋಜಿಸಿದ ನಿರ್ಭಯಾ ದುರಂತವಾಗಿದೆ ಎಂದು ಕಿಡಿಕಾರಿದೆ.ದೇಶಾದ್ಯಂತ ಘಟನೆಯ ಬಗ್ಗೆ ಮಹಿಳೆಯರು ಆಕ್ರೋಶಗೊಂಡಿದ್ದಾರೆ ಎಂದು ಲೇಖನದಲ್ಲಿ ಪ್ರಕಟಿಸಿದೆ.
ಒಂದು ವೇಳೆ, ಮಹಿಳೆಯ ವರ್ತನೆಯನ್ನು ರಾಷ್ಟ್ರಭಕ್ತಿ ಎಂದು ನೀವು ಭಾವಿಸುವುದಾದಲ್ಲಿ ನಿಮ್ಮ ಮೆದುಳಿಗೆ ಚಿಕಿತ್ಸೆ ನೀಡಲು ತಾಲಿಬಾನ್ ವೈದ್ಯರೇ ಸೂಕ್ತ. ಯಾಕೆಂದರೆ, ಇಂತಹ ಘಟನೆಗಳು ತಾಲಿಬಾನ್ ಅಡಳಿತವಿರುವ ಪ್ರದೇಶಗಳಲ್ಲಿ ಮಾತ್ರ ನಡೆಯುತ್ತವೆ ಎಂದು ಶಿವಸೇನೆ ಮೋದಿ ಸರಕಾರದ ವಿರುದ್ಧ ಗುಡುಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.