ಮಹಾರಾಷ್ಟ್ರ ಬಿಜೆಪಿ ನಾಯಕ ಸಚಿನ್ ಶೆಲ್ಕೆ (38) ಅವರನ್ನು ತಾಳೆಗಾಂನ ದಭಾಡೆಯಲ್ಲಿ ಭಾನುವಾರ ಹಾಡಹಗಲೇ ಬರ್ಬರವಾಗಿ ಹತ್ಯೆಗೈಯ್ಯಲಾಗಿದೆ.
ತಾಳೆಗಾಂ ಪುರಸಭೆಯ ಮಾಜಿ ಮೇಯರ್ ಆಗಿದ್ದ ಸಚಿನ್, ಅವರನ್ನು ದುಷ್ಕರ್ಮಿಗಳ ಗುಂಪು ಗುಂಡಿಕ್ಕಿ, ಹರಿತವಾದ ಆಯುಧದಿಂದ ಇರಿದು ಹತ್ಯೆಗೈದು ಪರಾರಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನಿಜಕ್ಕೂ ನಡೆದಿದ್ದೇನು?
ತಮ್ಮ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಸಚಿನ್ ಅವರನ್ನು ಪೆಟ್ರೋಲ್ ಪಂಪ್ ಬಳಿ ಭಾನುವಾರ ಸುಮಾರು 11 ಗಂಟೆ ಸುಮಾರಿಗೆ ಅಡ್ಡಗಟ್ಟಿದ ದುಷ್ಕರ್ಮಿಗಳು ಕಾರ್‌ನಿಂದ ಇಳಿಯುವಂತೆ ಹೇಳಿದ್ದಾರೆ ಮತ್ತು ಅವರು ಹೊರ ಬರುತ್ತಿದ್ದಂತೆ ಗುಂಡಿನ ಮಳೆಗರೆದಿದ್ದಾರೆ. ಜತೆಗೆ ಹರಿತವಾದ ಆಯುಧದಿಂದ ಇರಿದು ಪರಾರಿಯಾಗಿದೆ ಎಂದು ಪೊಲೀಸ್ ಅಧೀಕ್ಷಕರಾದ ಜೈ ಜಾಧವ್ ತಿಳಿಸಿದ್ದಾರೆ.
ಸುತ್ತಮುತ್ತಲಿದ್ದ ಜನ ತಕ್ಷಣ ಅವರನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಆದರೆ ಮಾರ್ಗ ಮಧ್ಯದಲ್ಲಿಯೇ ಅವರು ಕೊನೆಯುಸಿರೆಳೆದಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ.
ಹಳೆಯ ವೈಷಮ್ಯ ಕೊಲೆಗೆ ಕಾರಣವಾಗಿರಬಹುದೆಂದು ಶಂಕಿಸಲಾಗಿದ್ದು 10 ಜನರ ಮೇಲೆ ಕೊಲೆ ಪ್ರಕರಣವನ್ನು ದಾಖಲಿಸಲಾಗಿದೆ. ಇವರೆಲ್ಲ ಶ್ಯಾಮ್ ದಭಾಡೆ ಎಂಬಾತನ ಸಹಚರರು ಎಂದು ಹೇಳಲಾಗುತ್ತಿದ್ದು ಸಾಕಷ್ಟು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿರುವ ಆತ ತಲೆ ಮರೆಸಿಕೊಂಡಿದ್ದಾನೆ.
ನಾಲ್ಕು ಆರೋಪಿಗಳನ್ನು ಬಂಧಿಸಲಾಗಿದ್ದು, ಘಟನೆ ನಡೆದ ಸ್ಥಳದ ಬಳಿ ಇದ್ದ ಸಿಸಿ ಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಇತರರಿಗಾಗಿ ಶೋಧ ನಡೆಸಲಾಗುತ್ತಿದೆ.
2013ರಲ್ಲಿ ಸಹ ಸಚಿನ್ ಮೇಲೆ ದಾಳಿಯಾಗಿತ್ತು. ಅವರ ತಂದೆ ಮತ್ತು ಸಹೋದರನ ಮೇಲು ಕೂಡ ಇಂತಹ ದಾಳಿ ನಡೆದಿತ್ತು. ಆದರೆ ಅದೃಷ್ಟವಶಾತ್ ಅವರು ಬದುಕುಳಿದಿದ್ದರು.
ಘಟನೆ ಬಳಿಕ ತಾಳೆಗಾಂ ಉದ್ವಿಗ್ನವಾಗಿದ್ದು ಸೂಕ್ತ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.
2010ರಲ್ಲೂ ನಗರದಲ್ಲಿ ಇಂತಹದೇ ಘಟನೆ ನಡೆದಿತ್ತು. ಮಾಹಿತಿ ಹಕ್ಕು ಕಾರ್ಯಕರ್ತ ಸತೀಶ್ ಶೆಟ್ಟಿ ಎಂಬುವವರನ್ನು ಬರ್ಬರವಾಗಿ ಕೊಲೆಗೈಯ್ಯಲಾಗಿತ್ತು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ