56 ಲಕ್ಷ ಮೌಲ್ಯದ 2000 ಮುಖಬೆಲೆಯ ಹೊಸ ನೋಟುಗಳನ್ನು ಹೊಂದಿರುವ ಆರೋಪ ಮೇಲೆ ಪಶ್ಚಿಮ ಬಂಗಾಳದ ಬಿಜೆಪಿ ನಾಯಕ ಮನೀಶ್ ಶರ್ಮಾ ಅವರನ್ನು ಮಂಗಳವಾರ ಬಂಧಿಸಲಾಗಿದೆ.
ಅಕ್ರಮ ಹಣ ಹೊಂದಿರುವ ಆರೋಪದ ಮೇಲೆ ಶರ್ಮಾ ಸೇರಿ 7 ಮಂದಿಯನ್ನು ವಶಕ್ಕೆ ಪಡೆದುಕೊಳ್ಳಲಾಗಿದ್ದು ಅವರೆಲ್ಲರೂ ಸ್ಥಳೀಯ ಕಲ್ಲಿದ್ದಲು ಮಾಫಿಯಾದ ಸದಸ್ಯರಾಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಎಪ್ರಿಲ್ - ಮೇ ತಿಂಗಳಲ್ಲಿ ನಡೆದ ವಿಧಾಸಭಾ ಚುನಾವಣೆಯಲ್ಲಿ ಬುರ್ದ್ವಾನ್ ಜಿಲ್ಲೆಯ ರಾಣಿಗಂಜ್‌ನಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಶರ್ಮಾ 18% ಮತಗಳನ್ನು ಪಡೆದು ಮೂರನೆಯ ಸ್ಥಾನಕ್ಕೆ ಕುಸಿದಿದ್ದರು. ಈತ ಅಸಾನ್ಸೋಲ್ ಸಂಸದೀಯ ಕ್ಷೇತ್ರದ ಬಿಜೆಪಿ ಸಂಸದ ಬಾಬುಲ್ ಸುಪ್ರಿಯೋಗೆ ಆಪ್ತನಾಗಿದ್ದಾನೆ ಎಂದು ತಿಳಿದು ಬಂದಿದೆ.
ಆರೋಪಿ ಶರ್ಮಾ ಅವರ ಪರ ವಹಿಸಲು ನಿರಾಕರಿಸಿರುವ ಬಿಜೆಪಿ, ಆತನನ್ನು ಕಳೆದ ಜುಲೈ ತಿಂಗಳಲ್ಲಿ ಪಕ್ಷದಿಂದ ವಜಾ ಮಾಡಲಾಗಿದೆ ಎಂದಿದೆ.
ಸ್ಥಳೀಯ ಕಲ್ಲಿದ್ದಲು ಮಾಫಿಯಾ ಜತೆ ಗುರುತಿಸಿಕೊಂಡಿದ್ದ ಶರ್ಮಾ ಬಳಿ ಕಪ್ಪುಹಣವನ್ನು ವಶಪಡಿಸಿಕೊಂಡಿರುವ ಪೊಲೀಸರು ವಿಚಾರಣೆಯನ್ನು ಕೈಗೊಂಡಿದ್ದಾರೆ.
ನೋಟು ನಿಷೇಧಕ್ಕೆ ಸಂಬಂಧಿಸಿದಂತೆ ಈಗಾಗಲೇ ಕೇಂದ್ರದ ವಿರುದ್ಧ ಕಿಡಿಕಾರುತ್ತಿರುವ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಅವರಿಗೆ ಶರ್ಮಾ ಬಂಧನದ ಮೂಲಕ ಬಿಜೆಪಿ ವಿರುದ್ಧ ಹರಿಹಾಯಲು ಮತ್ತಷ್ಟು ಪುಷ್ಠಿ ಸಿಕ್ಕಂತಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.