ನವದೆಹಲಿ: ನಿನ್ನೆ ತೈಲ ಬೆಲೆ ಏರಿಕೆ ವಿರೋಧಿಸಿ ದೇಶದಾದ್ಯಂತ ಭಾರತ್ ಬಂಧ್ ಗೆ ಕರೆ ನೀಡಿದ್ದ ಕಾಂಗ್ರೆಸ್ ನ ಒಳ ಲೆಕ್ಕಾಚಾರ ಬೇರೆಯದೇ ಆಗಿತ್ತು ಎಂದು ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ ಬಹಿರಂಗಪಡಿಸಿದ್ದಾರೆ.
ನಿನ್ನೆ ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಕಾಂಗ್ರೆಸ್ ಅಧ್ಯಕ್ಷ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅರ್ಜಿ ವಿಚಾರಣೆಯ ತೀರ್ಪು ಬರುವುದಿತ್ತು. ಅದರಲ್ಲಿ ಕಾಂಗ್ರೆಸ್ ನ ಇಬ್ಬರೂ ನಾಯಕರಿಗೆ ಹಿನ್ನಡೆಯಾಗಿತ್ತು. ಈ ವಿಚಾರವನ್ನು ಮೊದಲೇ ಅರಿತಿದ್ದ ಕಾಂಗ್ರೆಸ್ ತಮ್ಮ ಪಕ್ಷದ ನಾಯಕರ ಹುಳುಕು ಗೊತ್ತಾಗಬಾರದೆಂದು ಬಂಧ್ ಗೆ ಕರೆ ನೀಡಿದರು ಎಂದು ಬಿಜೆಪಿ ವಕ್ತಾರರು ಆರೋಪಿಸಿದ್ದಾರೆ.
ದೆಹಲಿ ಹೈಕೋರ್ಟ್ ನಲ್ಲಿ ರಾಹುಲ್ ಮತ್ತು ಸೋನಿಯಾ ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ಆದಾಯವನ್ನು ಆ ವರ್ಷದ ಐಟಿ ರಿಟರ್ನ್ಸ್ ನಲ್ಲಿ ಉಲ್ಲೇಖಿಸದೇ ಇರುವ ವಿಚಾರವನ್ನು ಮತ್ತೆ ತನಿಖೆ ಮಾಡಬಾರದು ಎಂದು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ನಿನ್ನೆ ಹೈಕೋರ್ಟ್ ತಳ್ಳಿ ಹಾಕಿದೆ. ಇದು ಕಾಂಗ್ರೆಸ್ ನಾಯಕರಿಗೆ ಹಿನ್ನಡೆಯಾಗಿದೆ. ಈ ವಿಚಾರ ದೊಡ್ಡ ಸುದ್ದಿಯಾಗಬಾರದು ಎಂಬ ಕಾರಣಕ್ಕೆ ಬಂದ್ ನಾಟಕ ಮಾಡಿದರು ಎಂದು ಸಂಬಿತ್ ಪಾತ್ರಾ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.