ಪಾರ್ಕಿಂಗ್‌ನಲ್ಲಿ ಸೈಕಲ್, ಬೈಕ್ ನಿಲ್ಲಿಸಿ ಹೋದರೆ ಅದು ಸುರಕ್ಷಿತವಲ್ಲವೆಂದು ಅದನ್ನು ಪೊಲೀಸ್ ಠಾಣೆ ಮುಂದೆ ಇಟ್ಟು ಹೋಗುವುದು ಸಾಮಾನ್ಯ. ನೀವು ಕೂಡ ಅದನ್ನು ಮಾಡಿರುತ್ತೀರಿ. ಠಾಣೆಯ ಮುಂದೆ ಅದು ಸೇಫ್ ಆಗಿರುತ್ತದೆ ಎಂಬುದು ನಮ್ಮ ನಂಬಿಕೆ. ಆದರೆ ಇತ್ತೀಚಿನ ಘಟನೆಗಳು ಆ ಭರವಸೆಯನ್ನು ಅಲ್ಲಾಡಿಸುತ್ತಿವೆ.
ಹೌದು, ಮಧ್ಯಪ್ರದೇಶದ ಉಜ್ಜೈನಿಯ ಫ್ರೀಗಂಜಾ ಪ್ರದೇಶದಲ್ಲಿರುವ ಪೊಲೀಸ್ ಠಾಣೆಯಲ್ಲಿ ಸ್ಥಳೀಯ ನಿವಾಸಿ ಸಚಿನ್ ವರ್ಮಾ ಬೈಕ್ ನಿಲ್ಲಿಸಿದ್ದರು. ಅಲ್ಲಿ ನಿಲ್ಲಿಸಿದರೆ ತಮ್ಮ ವಾಹನ ಸುರಕ್ಷಿತವಾಗಿರುತ್ತದೆ ಎಂಬ ನಂಬಿಕೆ ಅವರದಾಗಿತ್ತು. ಆದರೆ ಅವರ ನಿರೀಕ್ಷೆ ಹುಸಿಯಾಗಿದೆ. ಚಾಲಾಕಿ ಕಳ್ಳನೊಬ್ಬ ಅದನ್ನು ಎಗರಿಸಿಯೇ ಬಿಟ್ಟಿದ್ದ.
ನಿಧಾನಕ್ಕೆ ಬೈಕ್ ಮೇಲೆ ಬಂದು ಕುಳಿತ ಕಳ್ಳನೊಬ್ಬ ಮಾಸ್ಟರ್ ಕೀ ಬಳಸಿ ಬೈಕ್ ಏರಿ ಪರಾರಿಯಾಗಿದ್ದಾನೆ. ಆತ ಕಳ್ಳತನ ಮಾಡುತ್ತಿರುವ ದೃಶ್ಯಾವಳಿ ಸಮೀಪದ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತಮಗೆ ಚಳ್ಳೆ ತಿನ್ನಿಸಿರುವ ಕಳ್ಳನಿಗಾಗಿ ಶೋಧ ನಡೆಸಿದ್ದಾರೆ.