ಚೆನ್ನೈ: ತಮಿಳುನಾಡಿನ ದಿವಂಗತ ಮುಖ್ಯಮಂತ್ರಿ ಜಯಲಲಿತಾರ ಪೊಯೇಸ್ ಗಾರ್ಡನ್ ನಿವಾಸ ಇದೀಗ ಕುರಕ್ಷೇತ್ರವಾಗಿದೆ. ಆಸ್ತಿಗಾಗಿ ಬಿಗ್ ಫೈಟ್ ನಡೆಯುತ್ತಿದೆ.
ಜಯಲಲಿತಾ ಸೋದರ ಸೊಸೆ ದೀಪಾ ಜಯಕುಮಾರ್ ಮತ್ತು ಶಶಿಕಲಾ ನಟರಾಜನ್ ನಡುವೆ ಜಯಾಗೆ ಸೇರಿದ 100 ಕೋಟಿ ರೂ. ಆಸ್ತಿಗಾಗಿ ಕಲಹವೇರ್ಪಟ್ಟಿದೆ. ಸದ್ಯ ಜಯಾ ಆಪ್ತೆ ಶಶಿಕಲಾ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಆದಾಯ ಮೀರಿ ಆಸ್ತಿ ಹೊಂದಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿಕ್ಷೆ ಅನುಭವಿಸುತ್ತಿದ್ದಾರೆ.
ಆದರೆ ಶಶಿಕಲಾ ಸಂಬಂಧಿಗಳು ಸದ್ಯಕ್ಕೆ ಚೆನ್ನೈನ ಜಯಲಲಿತಾಗೆ ಸೇರಿದ ಪೊಯೇಸ್ ಗಾರ್ಡನ್ ನಿವಾಸದಲ್ಲಿ ನೆಲೆಸಿದ್ದಾರೆ. ಇದೀಗ ನಿವಾಸಕ್ಕೆ ಪ್ರವೇಶಿಸಲು ಪ್ರಯತ್ನಿಸಿದ ದೀಪಾ ಜಯಕುಮಾರ್ ರನ್ನು ಶಶಿಕಲಾ ಸಂಬಂಧಿಗಳು ಒಳಬಿಡುತ್ತಿಲ್ಲ. ಇದರಿಂದಾಗಿ ಎರಡೂ ಬಣಗಳ ನಡುವೆ ಕಲಹವೇ ಏರ್ಪಟ್ಟಿದೆ.
ಜಯಾಗೆ ಸೇರಿದ ಆಸ್ತಿ ಸೋದರ ಸಂಬಂಧಿಗಳಾದ ತಮಗೆ ಸೇರಬೇಕೆಂಬುದು ಸೋದರ ಸೊಸೆ ದೀಪಾ ವಾದವಾದರೆ, ಅತ್ತ ಶಶಿಕಲಾ ಕೂಡಾ ಜಯಾ ಆಸ್ತಿಗೆ ಪಾಲುದಾರರು ಎಂದು ಆಕೆಯ ಸಂಬಂಧಿಗಳು ಕಿತ್ತಾಡುತ್ತಿದ್ದಾರೆ.