ನವದೆಹಲಿ : ದೇಶದ ಆರ್ಥಿಕತೆಗೆ ಭವಿಷ್ಯದಲ್ಲಿ ಬಿಗ್ ಬೂಸ್ಟ್ ನೀಡುವ ಮಹತ್ತರ ಕೆಲಸಕ್ಕೆ ಜಿ20 ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ನಾಂದಿ ಹಾಡಿದ್ದಾರೆ.
ಏಷ್ಯಾದಲ್ಲಿ ಚೀನಾದ ಅಧಿಪತ್ಯಕ್ಕೆ ಕೊನೆ ಹಾಡುವ ದೃಷ್ಟಿಯಿಂದ ಭಾರತ-ಮಧ್ಯಪ್ರಾಚ್ಯ-ಯುರೋಪ್ ನಡುವೆ ಮೆಗಾ ಎಕಾನಾಮಿಕ್ ಕಾರಿಡಾರ್ ಆರಂಭಿಸುವ ಘೋಷಣೆಯನ್ನು ಪ್ರಧಾನಿ ಮೋದಿ ಮಾಡಿದ್ದಾರೆ.
ಭಾರತ, ಸೌದಿ ಅರೇಬಿಯಾ, ಯುಎಇ, ಐರೋಪ್ಯ ಒಕ್ಕೂಟ, ಫ್ರಾನ್ಸ್, ಇಟಲಿ, ಜರ್ಮನಿ ಮತ್ತು ಅಮೆರಿಕಾ ದೇಶಗಳು ರೈಲ್ವೇ-ಬಂದರು ಸಂಪರ್ಕದ ಮೆಗಾ ಯೋಜನೆಯ ಭಾಗವಾಗಲಿವೆ. ಜಗತ್ತಿನ ಸುಸ್ಥಿರ ಅಭಿವೃದ್ಧಿ ಮತ್ತು ಸಂಪರ್ಕ ವ್ಯವಸ್ಥೆಗೆ ಈ ಕಾರಿಡಾರ್ ಹೊಸ ದಿಕ್ಸೂಚಿ ಆಗಲಿದೆ ಎಂದು ಪ್ರಧಾನಿ ಮೋದಿ ವ್ಯಾಖ್ಯಾನಿಸಿದ್ದಾರೆ.
ಇದನ್ನು ಗೇಮ್ಚೇಂಜಿಂಗ್ ಹೂಡಿಕೆ, ಬಿಗ್ ಡೀಲ್ ಎಂದು ಅಮೆರಿಕಾ ಅಧ್ಯಕ್ಷ ಬೈಡೆನ್ ಬಣ್ಣಿಸಿದ್ದಾರೆ. ಈ ಯೋಜನೆ ರೈಲ್ವೇ ಲಿಂಕ್, ವಿದ್ಯುತ್ ಕೇಬಲ್, ಹೈಡ್ರೋಜನ್ ಪೈಪ್ಲೈನ್, ಹೈಸ್ಪೀಡ್ ಡೇಟಾ ಕೇಬಲ್ ಒಳಗೊಂಡಿರಲಿದೆ. ಈ ಮಧ್ಯೆ, ದೆಹಲಿ ಡಿಕ್ಲರೇಷನ್ಗೆ ಜಿ-20 ರಾಷ್ಟ್ರಗಳು ಸರ್ವಸಮ್ಮತ ಒಪ್ಪಿಗೆ ಸೂಚಿಸಿವೆ.
ರಷ್ಯಾ- ಉಕ್ರೇನ್ ಯುದ್ಧದ ವಿಚಾರದಲ್ಲಿಯೂ ಒಮ್ಮತಾಭಿಪ್ರಾಯ ಮೂಡಿದೆ. ಯಾವುದೇ ದೇಶದ ಸಾರ್ವಭೌಮತೆಗೆ ಭಂಗ ತರಬಾರದು. ಅಣ್ವಸ್ತ್ರಗಳನ್ನು ತೋರಿಸಿ ಬೆದರಿಕೆ ಒಡ್ಡುವುದನ್ನು ಒಪ್ಪಲಾಗದು. ಬಿಕ್ಕಟ್ಟು ಬಗೆಹರಿಸಲು ಶಾಂತಿಯೊಂದೇ ಮಾರ್ಗ. ರಾಜತಾಂತ್ರಿಕ ಮಾರ್ಗಗಳ ಮೂಲಕ ಉಕ್ರೇನ್ನಲ್ಲಿ ಶಾಂತಿ ಸ್ಥಾಪನೆ ಆಗಬೇಕು ಎಂಬ ತೀರ್ಮಾನವನ್ನು ಅಂಗೀಕರಿಸಿದೆ.