ಒಂದು ಚಿಕ್ಕ ಕಳ್ಳತನದ ಪ್ರಕರಣ ಕೂಡ ವರ್ಷಗಟ್ಟಲೆ ವಿಚಾರಣೆಗೊಳಪಡುವ ಈ ದೇಶದಲ್ಲಿ ಅತ್ಯಾಚಾರ ಪ್ರಕರಣವೊಂದು 13 ದಿನದಲ್ಲಿ ಇತ್ಯರ್ಥವಾಗಿದೆ ಎಂದರೆ ನಂಬುತ್ತೀರಾ? ಹೌದು, ಪಶ್ಚಿಮ ಬಂಗಾಳದ ನ್ಯಾಯಾಲಯವೊಂದು ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಕೇವಲ 13 ದಿನಗಳಲ್ಲಿ ವಿಚಾರಣೆ ನಡೆಸಿ ತೀರ್ಪು ಪ್ರಕಟಿಸಿರುವುದರ ಮೂಲಕ ದೇಶದಲ್ಲಿ ಹೊಸ ಸಂಚಲನವನ್ನು ಮೂಡಿಸಿದೆ.
ಡಿಸೆಂಬರ್ 6 ರಂದು ನಡಿಯಾ ಜಿಲ್ಲೆಯ ಕೃಷ್ಣನಗರದಲ್ಲಿ ಈ ಅತ್ಯಾಚಾರ ನಡೆದಿತ್ತು. ಬಿಜನ್ ಸಿಲ್ (50) ಎಂಬ ಹೆಸರಿನ ಕ್ಷೌರಿಕ ವೃದ್ಧನೊಬ್ಬನಿಗೆ ಕ್ಷೌರ ಮಾಡಲು ಆಗಾಗ ಆತನ ಮನೆಗೆ ಹೋಗುತ್ತಿದ್ದ. ಅಂತೆಯೆ ಡಿಸೆಂಬರ್ 6 ರಂದು ಅವರ ಮನೆಗೆ ಹೋದಾಗ ವೃದ್ಧನ 8 ವರ್ಷದ ಮೊಮ್ಮಗಳ ಮೇಲೆ ಅತ್ಯಾಚಾರ ಎಸಗಿದ್ದ.
ಬಾಲಕಿಯ ಕಿರುಚಾಟವನ್ನು ಕೇಳಿ ಓಡಿ ಬಂದ ಜನರು ಆರೋಪಿಯನ್ನು ಹಿಡಿದು ಕೋಟ್ವಾಲಿ ಠಾಣಾ ಪೊಲೀಸರಿಗೊಪ್ಪಿಸಿದ್ದರು.
ಆರೋಪಿಯ ಮೇಲೆ ಎಫ್ಐಆರ್ ದಾಖಲಿಸಿದ್ದ ಪೊಲೀಸರು ಅದೇ ದಿನ ಸ್ಥಳೀಯ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. 13 ದಿನ ವಿಚಾರಣೆ ನಡೆಸಿದ ಕೋರ್ಟ್ ಪೋಸ್ಕೋ ಕಾಯಿದೆಯಡಿಯಲ್ಲಿ ಮಂಗಳವಾರ ಆರೋಪಿಗೆ 10 ವರ್ಷ ಜೈಲು ಶಿಕ್ಷೆ ಮತ್ತು 10,000 ರೂಪಾಯಿ ದಂಡವನ್ನು ವಿಧಿಸಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.