ನವದೆಹಲಿ : ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇಂದು ಶಾಲಾ ಬಾಲಕಿ ಮೇಲೆ ನಡೆದ ಆ್ಯಸಿಡ್ ದಾಳಿ ಜನರನ್ನು ಭಯಭೀತಗೊಳಿಸಿದೆ.
ಈ ಭೀಕರ ಘಟನೆ ನಡೆದ ಬಳಿಕ ದೆಹಲಿ ಮಹಿಳಾ ಆಯೋಗದ ಮುಖ್ಯಸ್ಥೆ ಸ್ವಾತಿ ಮಲಿವಾಲ್ ಮಾರುಕಟ್ಟೆಗಳಲ್ಲಿ ಆ್ಯಸಿಡ್ ತರಕಾರಿಯಂತೆ ಮಾರಾಟವಾಗುತ್ತಿದೆ ಎಂದು ಕಿಡಿಕಾರಿದ್ದಾರೆ.
ಪಶ್ಚಿಮ ದೆಹಲಿಯ ಉತ್ತಮ್ ನಗರದ ಬಳಿಕ ಇಂದು ಬೆಳಗ್ಗೆ 7:30ರ ಹೊತ್ತಿಗೆ ಬೈಕ್ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ 17 ವರ್ಷದ ಬಾಲಕಿ ಮೇಲೆ ಆ್ಯಸಿಡ್ ಎರಚಿದ್ದಾರೆ. ಘಟನೆಯಿಂದ ಬಾಲಕಿಯ ಮುಖ ಹಾಗೂ ಕಣ್ಣುಗಳಿಗೆ ಸುಟ್ಟ ಗಾಯಗಳಾಗಿವೆ.
ಬಾಲಕಿಯನ್ನು ನಗರದ ಸಫ್ದರ್ಜಂಗ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇಬ್ಬರು ಆರೋಪಿಗಳ ಹೆಸರನ್ನು ಬಾಲಕಿ ಪೊಲೀಸರಿಗೆ ತಿಳಿಸಿದ್ದಾಳೆ. ಆರೋಪಿಗಳಲ್ಲಿ ಈಗಾಗಲೇ ಒಬ್ಬನನ್ನು ಬಂಧಿಸಲಾಗಿದೆ.