ಶ್ರೀನಗರ: ಮೊಬೈಲ್ ಬಳಕೆ ಮಾಡುವ ವಿಚಾರಕ್ಕೆ ಆರಂಭವಾದ ಗಲಾಟೆಯಿಂದಾಗಿ ಸಿಟ್ಟಿಗೆದ್ದ ಭಾರತೀಯ ಸೇನೆ ಯೋಧನೊಬ್ಬ ತನ್ನ ಸೇನಾಧಿಕಾರಿಯನ್ನೇ ಗುಂಡಿಕ್ಕಿ ಹೆತ್ಯೆ ಮಾಡಿರುವ ಘಟನೆ ನಡೆದಿದೆ.
ಜಮ್ಮು ಮತ್ತು ಕಾಶ್ಮೀರದ ಬುಚಾರ್ ಪೋಸ್ಟ್ ನಲ್ಲಿರುವ ಸೇನಾ ಕ್ಯಾಂಪ್ ನಲ್ಲಿ ಬೆಳಗ್ಗೆ ಈ ಘಟನೆ ನಡೆದಿದೆ. 71 ರಾಷ್ಟ್ರೀಯ ರೈಫಲ್ಸ್ ತಂಡದ ಸೇನಾಧಿಕಾರಿಯನ್ನು ಸೈನಿಕ ತನ್ನ ಬಂದೂಕಿನಿಂದ ಗುಂಡು ಹಾರಿಸಿ ಕೊಂದಿದ್ದಾರೆ ಎಂದು ಹೇಳಲಾಗುತ್ತಿದೆ. ಸೇನಾ ಮೂಲಗಳ ಪ್ರಕಾರ ಅಧಿಕಾರಿಯ ತಪಾಸಣೆ ನಡೆಸಿದಾಗ ಕರ್ತವ್ಯದಲ್ಲಿದ್ದ ಯೋಧ ಮೊಬೈಲ್ನಲ್ಲಿ ಮಾತನಾಡುತ್ತಿದ್ದ. ಇದರಿಂದ ಸಿಟ್ಟಿಗೆದ್ದ ಮೇಜರ್ ಶಿಖರ್ ಅವರು ಯೋಧನಿಂದ ಮೊಬೈಲ್ ಕಿತ್ತುಕೊಂಡು, ಕರ್ತವ್ಯದಲ್ಲಿರುವಾಗ ಫೋನ್ ಬಳಸಬೇಡ ಎಂದು ಖಡಕ್ ಆಗಿ ಹೇಳಿದ್ದಾರೆ.
ಇದರಿಂದ ಕ್ರೋಧಗೊಂಡ ಯೋಧ ತನ್ನ ಬಳಿಯಿದ್ದ ಎಕೆ 47 ರೈಫಲ್ನಿಂದ ಎರಡು ಸುತ್ತು ತನ್ನ ಹಿರಿಯ ಅಧಿಕಾರಿ ಮೇಜರ್ ಶಿಖರ್ ಅವರತ್ತ ಹಿಂದಿನಿಂದ ಗುಂಡು ಹಾರಿಸಿದ್ದಾನೆ. ಮಾರಣಾಂತಿಕವಾಗಿ ಗಾಯಗೊಂಡ ಮೇಜರ್ ಶಿಖರ್ ಅವರನ್ನು ತಕ್ಷಣ ಆಸ್ಪತ್ರೆಗೆ ಸೇರಿಸಲಾಯಿತಾದರೂ ಅಷ್ಟೊತ್ತಿಗಾಗಲೇ ಅವರು ಅಸುನೀಗಿದ್ದರು.