ಹೈದರಾಬಾದ್: ಹಳೆಯ ಪ್ರಕರಣವೊಂದರಲ್ಲಿ ಖ್ಯಾತ ನಟಿ, ಮಾಜಿ ಸಂಸದೆ ಜಯಪ್ರದಾರನ್ನು ತಕ್ಷಣವೇ ಬಂಧಿಸಲು ಕೋರ್ಟ್ ಜಾಮೀನು ರಹಿತ ವಾರಂಟ್ ಜಾರಿ ಮಾಡಿದೆ.
2019 ರ ಲೋಕಸಭಾ ಚುನಾವಣೆ ವೇಳೆ ನಿಯಮ ಉಲ್ಲಂಘಿಸಿದ್ದಕ್ಕಾಗಿ ಆಕೆಯ ಮೇಲೆ ಎರಡು ಪ್ರಕರಣ ದಾಖಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯನ್ನು ಬಂಧಿಸಿ ತಕ್ಷಣವೇ ನ್ಯಾಯಾಲಕ್ಕೆ ಹಾಜರುಪಡಿಸಲು ರಾಂಪುರ ಜಿಲ್ಲಾ ಎಸ್ಪಿಗೆ ನ್ಯಾಯಾಲಯ ಆದೇಶ ಹೊರಡಿಸಿದೆ.
ಪ್ರಕರಣದ ಹಿನ್ನಲೆ
2019 ರಲ್ಲಿ ಜಯಪ್ರದಾ ಬಿಜೆಪಿಯಿಂದ ರಾಂಪುರ ಸಂಸದೀಯ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದರು. ಈ ವೇಳೆ ಚುನಾವಣಾ ನಿಯಮಗಳನ್ನು ಉಲ್ಲಂಘಿಸಿದ್ದಕ್ಕೆ ಆಕೆಯ ಮೇಲೆ ಕೌಮಾರಿ ಮತ್ತು ಸ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೀಪಲ್ಸ್ ಕೋರ್ಟ್ ನಲ್ಲಿ ವಿಚಾರಣೆ ನಡೆದಿತ್ತು. ವಿಚಾರಣೆಗೆ ಹಾಜರಾಗಲು ಹಲವು ಬಾರಿ ಸೂಚಿಸಿದರೂ ನಟಿ ಬಂದಿರಲಿಲ್ಲ. ಹೀಗಾಗಿ ಈಗ ಜಾಮೀನು ರಹಿತ ವಾರಂಟ್ ಜಾರಿ ಮಾಡಲಾಗಿದೆ. ಇದೀಗ ಜಯಪ್ರದಾರನ್ನು ಬಂಧಿಸಲು ಸೂಚನೆ ನೀಡಲಾಗಿದ್ದು ಮುಂದಿನ ವಿಚಾರಣೆ ಫೆಬ್ರವರಿ 27 ಕ್ಕೆ ನಡೆಯಲಿದೆ. ಇದಕ್ಕೆ ಮೊದಲು ಜಯಪ್ರದಾಗೆ ತಮ್ಮ ನೌಕರರಿಗೆ ಇಎಸ್ ಐ ಪಾವತಿ ಮಾಡದ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಶಿಕ್ಷೆಯಾಗಿತ್ತು. ಇದೀಗ ಮತ್ತೊಂದು ಪ್ರಕರಣ ಅವರಿಗೆ ಮುಳುವಾಗಿದೆ.