ಉತ್ತರ ಪ್ರದೇಶದಲ್ಲಿ ಆರಂಭವಾಗಿರುವ ರಾಜಕೀಯ ಭಿನ್ನಮತ ಇಂದು ಕೂಡ ಮುಂದುವರೆದಿದ್ದು, ಈ ರಾಜಕೀಯ ಬಿರುಗಾಳಿಗೆ ಮೂಲ ಕಾರಣ ಎನ್ನಲಾಗುತ್ತಿರುವ ಅಮರ್ ಸಿಂಗ್ ಈ ಕುರಿತು ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ. ಅದಕ್ಕೆ ಬದಲಾಗಿ ಅಖಿಲೇಶ್‌ಗೆ ನನ್ನ ಶುಭ ಹಾರೈಕೆಗಳು ಎಂದು ಸುಮ್ಮನಾಗಿದ್ದಾರೆ ಅವರು.
ಅಖಿಲೇಶ್ ಅವರಿಗೆ ನನ್ನ ಶುಭ ಕಾಮನೆಗಳು, ಅವರು ಸರ್ವೋಚ್ಛ ನಾಯಕನ ಮಗ, ನಾನೇನೂ ಪ್ರತಿಕ್ರಿಯಿಸಲಾರೆ ಎಲ್ಲ ಪ್ರಶ್ನೆಗಳಿಗೆ ಮೌನವೇ ನನಗೆ ಅತ್ಯುತ್ತಮ ಉತ್ತರ ಎಂದಿದ್ದಾರೆ ಎಂದು ರಾಜ್ಯಸಭಾ ಸಂಸದರಾಗಿರುವ ಅಮರ್ ಸಿಂಗ್ ಹೇಳಿದ್ದಾರೆ.
ಬಳಿಕ ನಡೆದ ಇನ್ನೊಂದು ಕಾರ್ಯಕ್ರಮದಲ್ಲಿ ತಮ್ಮ ಬೆನ್ನ ಹಿಂದೆ ನಿಂತಿದ್ದಕ್ಕಾಗಿ ಸಿಂಗ್, ಎಸ್‌ಪಿ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಮತ್ತು ರಾಜ್ಯಾಧ್ಯಕ್ಷ ಶಿವಪಾಲ್ ಸಿಂಗ್ ಯಾದವ್ ಅವರಿಗೆ ಕೃತಜ್ಞತೆ ಸಲ್ಲಿಸಿದರು.
ಸೋಮವಾರ ನಡೆದ ಪಕ್ಷದ ವರಿಷ್ಠರ ಸಭೆಯಲ್ಲಿ ಅಖಿಲೇಶ್ ಯಾದವ್, ಪಕ್ಷದಲ್ಲಿ ಎದ್ದಿರುವ ಎಲ್ಲ ಗೊಂದಲ, ಭಿನ್ನಮತಕ್ಕೆ ಪಕ್ಷಕ್ಕೆ
ಮರಳಿರುವ ಅಮರ್ ಸಿಂಗ್ ಅವರೇ ಕಾರಣ ಎಂದು ಆರೋಪಿಸಿದ್ದರು. ಇದರಿಂದ ಆಕ್ರೋಶಗೊಂಡಿದ್ದ ಮುಲಾಯಂ ಅಮರ್ ಸಿಂಗ್ ಇಲ್ಲದಿದ್ದರೆ ನಾನು ಜೈಲು ಸೇರುತ್ತಿದ್ದೆ. ನನ್ನನ್ನು ರಕ್ಷಿಸಿದ ಸಿಂಗ್ ಬಗ್ಗೆ ನೀನು ಮಾತನಾಡುತ್ತೀಯಾ? ಆತ ನನ್ನ ಸಹೋದರನಿದ್ದಂತೆ. ಅವರ ಬಗ್ಗೆ ಮಾತನಾಡುವ ಯೋಗ್ಯತೆ ನಿನಗೇನಿದೆ ಎಂದು ಮುಲಾಯಂ ಸಿಂಗ್ ಯಾದವ್ ಬಹಿರಂಗವಾಗಿಯೇ ತಮ್ಮ ಪುತ್ರನ ವಿರುದ್ಧ ಹರಿಹಾಯ್ದಿದ್ದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ