ಕಾಬೂಲ್: ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ನ್ನು ತಾಲಿಬಾನ್ ವಶಕ್ಕೆ ಪಡೆದ ನಂತರ ಅಲ್ಲಿರುವ ಭಾರತೀಯರನ್ನು ಸ್ಥಳಾಂತರಿಸಲು ಪ್ರಯತ್ನಿಸಲಾಗುತ್ತಿದ್ದು, 85 ಭಾರತೀಯರನ್ನು ಹೊತ್ತ ಭಾರತೀಯ ವಾಯುಪಡೆಯ ಸಿ-130 ಜೆ ವಿಮಾನ ಶನಿವಾರ ಬೆಳಗ್ಗೆ ಕಾಬೂಲ್ ನಿಂದ ಪ್ರಯಾಣ ಆರಂಭಿಸಿದೆ.
ಕಾಬೂಲ್ ನಿಂದ ಟೇಕಾಪ್ ಆದ ವಿಮಾನ ಇಂದನ ತುಂಬಿಸಿಕೊಳ್ಳುವ ಸಲುವಾಗಿ ತಜಕಿಸ್ತಾನ್ ನಲ್ಲಿ ಇಳಿದಿದೆ. ಕಾಬೂಲ್ ನಿಂದ ಭಾರತೀಯ ನಾಗರಿಕರನ್ನು ಸ್ಥಳಾಂತರಿಸಲು ಭಾರತೀಯ ಅಧಿಕಾರಿಗಳು ನೆರವಾಗುತ್ತಿದ್ದಾರೆ ಎಂದು ಮೂಲಗಳು ಹೇಳಿರುವುದಾಗಿ ಎಎನ್ ಐ ಸುದ್ದಿಸಂಸ್ಥೆ ವರದಿ ಮಾಡಿದೆ.
ಸರ್ಕಾರ ಸಂಘಟಿತ ಪ್ರಯತ್ನದೊಂದಿಗೆ ಭಾರತೀಯ ನಾಗರಿಕರನ್ನು ಸುರಕ್ಷಿತವಾಗಿ ಸ್ವದೇಶಕ್ಕೆ ವಾಪಸ್ ಕರೆತರುತ್ತಿದೆ. ಕಳೆದ ಸೋಮವಾರ ಕಾಬೂಲ್ ತಾಲಿಬಾನ್ ಉಗ್ರರ ವಶವಾದ ನಂತರ ಭಾರತೀಯ ವಾಯುಪಡೆಯ ಎರಡು ವಿಮಾನಗಳು ಅಮೆರಿಕ ಭದ್ರತಾ ಪಡೆಗಳಿಂದ ಕ್ಲಿಯರೆನ್ಸ್ ಪಡೆದು ಕೆಲ ಪತ್ರಕರ್ತರು, ಐಟಿಬಿಪಿ ಸಿಬ್ಬಂದಿ ಸೇರಿದಂತೆ 180 ಅಧಿಕಾರಿಗಳನ್ನು ಭಾರತಕ್ಕೆ ಕರೆತಂದಿದ್ದವು.