ಕಾಂಗ್ರೆಸ್ ಯುವ ನೇತಾರ ರಾಹುಲ್ ಗಾಂಧಿ ಅವರಿಗೆ ಎಐಸಿಸಿ ಅಧ್ಯಕ್ಷ ಸ್ಥಾನ ನೀಡುವ ಮೂಲಕ ಕಾಂಗ್ರೆಸ್ ಪಕ್ಷ ಮೊಘಲ ಚಕ್ರವರ್ತಿ ಔರಂಗಜೇಬನ ಆಡಳಿತಕ್ಕೆ ಮೊರೆ ಹೋಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಟೀಕೆ ಮಾಡಿದ್ದಾರೆ.
ಗುಜರಾತ ರಾಜ್ಯದ ವಿಧಾನಸಭೆ ಚುನಾವಣೆ ಅಂಗವಾಗಿ ಧರ್ಮಾಪುರ, ಭಾವ್‍ನಗರ, ಜುನಘಡ ಮತ್ತು ಜಾಮ್ ನಗರದಲ್ಲಿ ಬಹಿರಂಗ ಪ್ರಚಾರದಲ್ಲಿ ಪಾಲ್ಗೊಂಡಿರುವ ಮೋದಿ ಅವರು, ಔರಂಗಜೇಬನ ಆಡಳಿತ ನೆನಪಿರಬೇಕಲ್ಲವೇ ಎಂದು ಪ್ರಶ್ನೆ ಮಾಡುವ ಮೂಲಕ ಪರೋಕ್ಷವಾಗಿ ರಾಹುಲ್ ಗಾಂಧಿ ಅವರಿಗೆ ಟಾಂಗ್ ನೀಡಿದರು.
ಯಾವ ಪಕ್ಷದಲ್ಲಿ ಆಂತರಿಕ ಪ್ರಜಾಪ್ರಭುತ್ವ ಇರುವುದಿಲ್ಲವೋ ಅಂತಹ ಪಕ್ಷದಲ್ಲಿ ವಂಶ ಪಾರಂಪರ್ಯ ಆಡಳಿತ ಇರುತ್ತದೆ. ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿರುವ ಕಾಂಗ್ರೆಸ್ ಪಕ್ಷ ದೇಶಕ್ಕೆ ಮಾರಕವಾಗಿದೆ. ಗೊತ್ತು- ಗುರಿ ಇಲ್ಲದ ಪಕ್ಷದಿಂದ ದೇಶಕ್ಕೆ ಏನೂ ಒಳಿತಾಗಲ್ಲ ಎನ್ನುವ ಮೂಲಕ ಪ್ರಚಾರ ಭಾಷಣದಲ್ಲಿ ಬಹುತೇಕವಾಗಿ ಕಾಂಗ್ರೆಸ್ ಹಾಗೂ ವಂಶ ಪಾರಂಪರ್ಯವಾದ ಆಡಳಿತದ ಬಗ್ಗೆ ಟೀಕೆ ಮಾಡಲು ಬಳಕೆ ಮಾಡಿದರು.
ನೋಟು ಅಮಾನ್ಯದ ಬಗ್ಗೆ ಸುಳ್ಳು ಆರೋಪ ಮಾಡಲಾಗುತ್ತಿದೆ. ದೇಶವನ್ನು ಹೆಚ್ಚು ಲೂಟಿ ಮಾಡಿದವರು ಕಾಂಗ್ರೆಸನವರು. ಭ್ರಷ್ಟಾಚಾರ ತಡೆಯುವ ಸಲುವಾಗಿ ನೋಟು ಅಮಾನ್ಯ ಮಾಡಲಾಗಿದೆ. ಇದರಿಂದ ಬಡವರಿಗೆ, ಮಧ್ಯಮ ವರ್ಗದವರಿಗೆ ಅನ್ಯಾಯವಾಗಿದೆಯೇ ಎಂದು ಪ್ರಶ್ನೆ ಮಾಡಿದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.