ಬೆಂಗಳೂರು: ರಾಜಕೀಯ ಆರೋಪ, ಪ್ರತ್ಯಾರೋಪದ ನಡುವೆಯೇ ರಾಜ್ಯ ರಾಜಕಾರಣದಲ್ಲಿ ಭೂ ಹಗರಣದ ಸದ್ದು ಮತ್ತೊಮ್ಮೆ ಪ್ರತಿಧ್ವನಿಸುತ್ತಿದೆ.
ಸಮಾಜ ಪರಿವರ್ತನ ಸಮುದಾಯದ ಮುಖ್ಯಸ್ಥ ಎಸ್.ಆರ್. ಹಿರೇಮಠ ಎರಡು ದಿನದ ಹಿಂದಷ್ಟೇ ಕುಮಾರಸ್ವಾಮಿ 200 ಎಕರೆ ಜಮೀನನ್ನು ಕಬಳಿಸಿದ್ದಾರೆ ಎಂದು ಆರೋಪಿಸಿ, ದಾಖಲೆ ಬಿಡುಗಡೆ ಮಾಡಿದ್ದರು. ಅದು ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಯನ್ನು ಹುಟ್ಟುಹಾಕಿದೆ. ಸಂಬಂಧಿಸಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಪತ್ರಿಕಾಗೋಷ್ಠಿ ನಡೆಸಿ ಎಸ್.ಆರ್. ಹಿರೇಮಠ್ ವಿರುದ್ಧ ಹರಿಹಾಯ್ದಿದ್ದಾರೆ. ನಮ್ಮ ಕುಟುಂಬವನ್ನು ರಾಜಕೀಯವಾಗಿ ತುಳಿಯುವ ವ್ಯವಸ್ಥಿತ ತಂತ್ರವಿದು. ರಾಜಕೀಯ ಏಳ್ಗೆಯನ್ನು ಬಯಸದ ಕೆಲವರು ಚುನಾವಣೆ ಸಂದರ್ಭದಲ್ಲಿ ಇಂತಹ ಆರೋಪ ಹೊರಸಿ ಸಾರ್ವಜನಿಕವಾಗಿ ತೇಜೋವಧೆ ಮಾಡುತ್ತಾರೆ ಎಂದು ಆಕ್ರೋಶ ವ್ಯಕ್ಯಪಡಿಸಿದ್ದಾರೆ.
ರಾಜಕೀಯ ಹಿನ್ನಲೆಯಿಟ್ಟುಕೊಂಡು ಈ ಕ್ಷೇತ್ರಕ್ಕೆ ನಾವು ಬಂದಿಲ್ಲ. ನಮ್ಮದು ರೈತಾಪಿ ಕುಟುಂಬ. ಸುಳ್ಳು ಆಸ್ತಿ, ಬೇನಾಮಿ ಆಸ್ತಿ ಮಾಡುವ ಜರೂರತ್ತು ನಮಗಿಲ್ಲ. ಅಪ್ಪ ಮಾಡಿಟ್ಟ ಆಸ್ತಿಯೇ ಬೇಕಾದಷ್ಟು ಇದೆ. ಹಿಂದೊಮ್ಮೆ ಇಂತಹದ್ದೇ ಆರೋಪ ಬಂದಾಗ ಲೋಕಾಯುಕ್ತ, ಸಿಒಡಿ ಅಧಿಕಾರಿಗಳೆಲ್ಲ ತನಿಖೆ ನಡೆಸಿವೆ. ಸಾಲದೆಂಬಂತೆ ಯಡಿಯೂರಪ್ಪ ಕೂಡಾ ವಿಶೆಷ ತನಿಖೆ ಮಾಡಿಸಿದ್ದಾರೆ. ಆವಾಗಲಾದರೂ ನಮ್ಮ ಬಳಿ ಇದ್ದ 200 ಎಕರೆ ಜಾಗ ಬಹಿರಂಗವಾಗಬೇಕಿತ್ತಲ್ಲ ಎನ್ನುವ ಮೂಲಕ ದೇವೇಗೌಡರು ಆರೋಪದಲ್ಲಿ ಹುರುಳಿಲ್ಲ ಎಂದರು.
ಬಿಡದಿಯಲ್ಲಿ ಕುಮಾರಸ್ವಾಮಿ ಹೆಸರಲ್ಲಿ ಅಬ್ಬಬ್ಬ ಎಂದು 70, 80 ಎಕರೆ ಜಾಗ ಇರಬಹುದು. ಅದು ಬಿಟ್ಟು ಬೇರೆ ಎಲ್ಲೂ ನಮ್ಮ ಕುಟುಂಬದ ಹೆಸರಲ್ಲಿ ಆಸ್ತಿಯಿಲ್ಲ. ಬೇಕಾದರೆ ಯಾವುದೇ ತನಿಖೆಗೂ ಸಿದ್ಧ ಎಂದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ