ಅಪರೂಪದ ಹಸ್ತಕ್ಷೇಪವೆಂಬಂತೆ ಬಿಜೆಪಿ ಹಿರಿಯ ಧುರೀಣ, ಲೋಕಸಭಾ ಸಂಸದ ಎಲ್.ಕೆ ಅಡ್ವಾಣಿ ಲೋಕಸಭಾ ಸಭಾಪತಿ ಸುಮಿತ್ರಾ ಮಹಾಜನ್ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಅನಂತ ಕುಮಾರ್ ವಿರುದ್ಧ ಅಸಮಧಾನ ವ್ಯಕ್ತ ಪಡಿಸಿದ್ದಾರೆ.
ಇವರೀರ್ವರು ಕೆಳಮನೆಯ ಕಾರ್ಯಭಾರವನ್ನು ನಿರ್ವಹಿಸಲು ವಿಫಲರಾಗಿದ್ದಾರೆ. ಸದನವನ್ನು ಅನಿರ್ದಿಷ್ಟ ಕಾಲಕ್ಕೆ ಯಾಕೆ ಮುಂದೂಡಲಾಗುತ್ತಿಲ್ಲ ಎಂದು ಅವರು ಆಶ್ಚರ್ಯ ವ್ಯಕ್ತ ಪಡಿಸಿದ್ದಾರೆ.
ನೋಟು ನಿಷೇಧಕ್ಕೆ ಸಂಬಂಧಿಸಿದಂತೆ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳ ನಡುವೆ ಕೋಲಾಹಲ ಏರ್ಪಟ್ಟು ಬುಧವಾರ ಲೋಕಸಭಾ ಕಲಾಪವನ್ನು ಮುಂದೂಡಲಾದ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿ ಈ ಅಭಿಪ್ರಾಯವನ್ನು ಹೊರಹಾಕಿದ್ದಾರೆ.
ನೀವು ( ಅನಂತ ಕುಮಾರ್) ಮತ್ತು ಸ್ಪೀಕರ್ ಕೆಳಮನೆಯನ್ನು ನಡೆಸಲು ವಿಫಲರಾಗಿದ್ದಿರಿ ಎಂದು ನೇರವಾಗಿ ಅವರು ಅನಂತ ಕುಮಾರ್ ಅವರ ಮುಂದೆಯೇ ತಮ್ಮ ಅಸಮಧಾನವನ್ನು ವ್ಯಕ್ತ ಪಡಿಸಿದ್ದಾರೆ. ಅವರ ಈ ಕೋಪದಿಂದ ವಿಚಲಿತರಾದ ಅವರ ಆಪ್ತ ಶಿಷ್ಯರೆಂದು ಗುರುತಿಸಲ್ಪಡುವ ಸಂಸದೀಯ ವ್ಯವಹಾರಗಳ ಸಚಿವ ಅನಂತ್ ಕುಮಾರ್ ಮಾಜಿ ಪ್ರಧಾನಿಯನ್ನು ಸಂತೈಸಲು ಪ್ರಯತ್ನಿಸುತ್ತಿದ್ದುದು ಕಂಡು ಬಂತು.
ಬಳಿಕ ಅಡ್ವಾಣಿ ಎಷ್ಟು ಗಂಟೆಯವರೆಗೆ ಕಲಾಪವನ್ನು ಮುಂದೂಡಲಾಗಿದೆ ಎಂದು ಲೋಕಸಭೆಯ ಅಧಿಕಾರಿಗಳಲ್ಲಿ ಪ್ರಶ್ನಿಸಿದರು. ಅವರು 2 ಗಂಟೆಯವರೆಗೆ ಎಂದುತ್ತರಿಸಿದಾಗ ಆಶ್ಚರ್ಯ ವ್ಯಕ್ತ ಪಡಿಸಿದ ಅವರು ಯಾಕೆ ಅನಿರ್ದಿಷ್ಟ ಕಾಲಕ್ಕೆ ಮುಂದೂಡಲಾಗುತ್ತಿಲ್ಲ ಎಂದು ಪ್ರಶ್ನಿಸಿದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.