ಮುಂಬರುವ ಪಂಜಾಬ್ ಮತ್ತು ಗೋವಾ ವಿಧಾನಸಭಾ ಚುನಾವಣೆಯನ್ನೆದುರಿಸಲು 'ಪ್ರಾಮಾಣಿಕ' ಪಾರ್ಟಿಯಾದ ಆಪ್ ಬಳಿ ಹಣವಿಲ್ಲ ಎಂದು ಪಕ್ಷದ ಮುಖ್ಯಸ್ಥ, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ.
ಗೋವಾದ ಮಾಪ್ಸಾದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದ ಕೇಜ್ರಿವಾಲ್, ಪಂಜಾಬ್, ಗೋವಾ ಚುನಾವಣೆಯನ್ನೆದುರಿಸಲು ನಮ್ಮ ಬಳಿ ನಯಾ ಪೈಸೆ ಇಲ್ಲ. ನಮ್ಮ ಬ್ಯಾಂಕ್ ಖಾತೆಗಳು ಖಾಲಿ ಬಿದ್ದಿವೆ.
ಪ್ರಾಮಾಣಿಕ ಪಕ್ಷಕ್ಕೆ ಆರ್ಥಿಕ ಬಿಕ್ಕಟ್ಟು ಸಾಮಾನ್ಯ. ದನಬೆಂಬಲವೊಂದನ್ನೇ ನೆಚ್ಚಿಕೊಂಡು, ಅವರ ಆಶೀರ್ವಾದದೊಂದಿಗೆ ನಾವು ಚುನಾವಣೆಯನ್ನು ಎದುರಿಸುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ.
ಮುಂದುವರೆಸಿದ ಅವರು, ಕಳೆದೆರಡು ವರ್ಷಗಳಿಂದ ನಾವು ದೆಹಲಿಯಲ್ಲಿ ಆಡಳಿತ ನಡೆಸುತ್ತಿದ್ದೇವೆ. ಬೇಕಿದ್ದರೆ ವಾಮಮಾರ್ಗದಲ್ಲಿ ಚುನಾವಣೆಗೆ ಸಾಕಾಗುವಷ್ಟು ಹಣವನ್ನು ಕೂಡಿ ಹಾಕಬಹುದಿತ್ತು. ಆದರೆ ಜನ ನಮ್ಮ ಪ್ರಾಮಾಣಿಕತೆಯನ್ನು ಮೆಚ್ಚಿ ಮತ ಹಾಕಿದ್ದಾರೆ. ನಾವು ಅವರ ನಂಬಿಕೆಗೆ ದ್ರೋಹ ಮಾಡಬಾರದು ಎಂದಿದ್ದಾರೆ.
ಪ್ರತಿಸ್ಪರ್ಧಿಗಳ ವಿರುದ್ಧ ಪ್ರಖರ ವಾಗ್ದಾಳಿ ನಡೆಸಿದ ಅವರು, ಬಿಜೆಪಿ, ಕಾಂಗ್ರೆಸ್ ಮತ್ತು ಮಹಾರಾಷ್ಟ್ರವಾದಿ ಗೋಮಾಂತಕ್ ಪಕ್ಷಗಳ ಅಂತ್ಯದ ದಿನಗಣನೆ ಆರಂಭವಾಗಿದೆ ಎಂದು ಭವಿಷ್ಯ ನುಡಿದಿದ್ದಾರೆ.
ಗೋವಾದ 40 ವಿಧಾನಸಭಾ ಕ್ಷೇತ್ರಗಳಲ್ಲಿ ಆಪ್ 28-32 ಕ್ಷೇತ್ರಗಳನ್ನು ತನ್ನ ಬುಟ್ಟಿಗೆ ಹಾಕಿಕೊಳ್ಳಲಿದೆ ಎಂದು ಅವರು ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.
ಮುಂದಿನ ತಿಂಗಳ 24ರಂದು ಪಂಜಾಬ್ ಮತ್ತು ಗೋವಾಗಳಲ್ಲಿ ವಿಧಾನಸಭಾ ಚುನಾವಣೆ ನಿಗದಿಯಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ