ಆಘಾತಕಾರಿ ಘಟನೆಯೊಂದರಲ್ಲಿ, ಪತ್ನಿಯ ಹತ್ಯೆಗೆ ಸುಪಾರಿ ನೀಡಿದ್ದ ವ್ಯಕ್ತಿಯೇ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ವರದಿಯಾಗಿದೆ.
ವರದಿಗಳ ಪ್ರಕಾರ, ಯಾಸಿರ್ ಎಂಬಾತ ತನ್ನ ಪತ್ನಿ ಮೆಹ್ಸರ್ ಜಹಾನ್ ಹತ್ಯೆಗೈದು ವಿಮೆ ಹಣ ಲಪಟಾಯಿಸುವ ಉದ್ದೇಶದಿಂದ ರೌಡಿಗಳಿಗೆ ಸುಪಾರಿ ನೀಡಿದ್ದಾನೆ ಎನ್ನಲಾಗಿದೆ.
ಯಾಸಿರ್ ಮೊಬೈಲ್ ಕರೆಗಳನ್ನು ಆಧರಿಸಿ ಪೊಲೀಸರು ಇಬ್ಬರು ಶಾರ್ಪ್ ಶೂಟರ್‌ಗಳಾದ ಅಯೋಧ್ಯಾ ಪ್ರಸಾದ್ ಮತ್ತು ಸಾದಿಕ್ ಅಲಿಯನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ ಪತ್ನಿಯ ಹತ್ಯೆಗೈಯುವ ಯಾಸಿರ್ ಸಂಚು ಬಹಿರಂಗಗೊಂಡಿದೆ.
ಯಾಸಿರ್ ತನ್ನ ಪತ್ನಿಯ ಹತ್ಯೆಗಾಗಿ ಸಂಚು ರೂಪಿಸಿದ್ದು ಮುಂಗಡವಾಗಿ 4 ಸಾವಿರ ರೂಪಾಯಿಗಳನ್ನು ನೀಡಿದ್ದಾನೆ ವಿಮೆ ಹಣ ಬಂದ ನಂತರ ಬಾಕಿ 40 ಸಾವಿರ ರೂಪಾಯಿಗಳನ್ನು ನೀಡುವುದಾಗಿ ಒಪ್ಪಿಕೊಂಡಿದ್ದ ಎಂದು ಬಂಧಿತ ಆರೋಪಿಗಳು ವಿಚಾರಣೆ ವೇಳೆಯಲ್ಲಿ ಬಾಯಿಬಿಟ್ಟಿದ್ದಾರೆ.
ಡಿಸೆಂಬರ್ 10 ರಂದು ತನ್ನ ಪ್ಲ್ಯಾನ್ ಪ್ರಕಾರ ಯಾಸಿರ್ ತನ್ನ ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ಸಂಬಂಧಿಕರ ಮನೆಗೆ ತೆರಳುತ್ತಿದ್ದಾಗ, ಸುಪಾರಿ ಪಡೆದ ಹಂತಕರು ಅವರ ಮೇಲೆ ದಾಳಿ ಮಾಡಿದ್ದಾರೆ. ಪತ್ನಿಯ ಮೈಮೇಲಿದ್ದ ಆಭರಣಗಳನ್ನು ದೋಚಿ ಗುಂಡಿನ ದಾಳಿ ನಡೆಸಿದ್ದಾರೆ. ಆದರೆ, ಅಕಸ್ಮಿಕವಾಗಿ ಗುಂಡು ಯಾಸಿರ್‌ಗೆ ತಗುಲಿದೆ. ಮೆಹರ್ ತಪ್ಪಿಸಿಕೊಂಡಿದ್ದಾಳೆ. ಆಕೆಯ ಮೇಲೆ ಗುಂಡಿನ ದಾಳಿ ನಡೆಸಲು ಪ್ರಯತ್ನಿಸಿದರಾದರೂ ವಿಫಲವಾಗಿದ್ದಾರೆ. ಗುಂಡಿನ ಶಬ್ದ ಕೇಳಿ ಗ್ರಾಮಸ್ಥರು ಬರುತ್ತಿರುವುದು ಕಂಡ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.
ಏತನ್ಮಧ್ಯೆ, ಪೊಲೀಸರು ಆರೋಪಿ ಯಾಸಿರ್ ವಿರುದ್ಧ ಪತ್ನಿಯ ಹತ್ಯೆ ಸಂಚಿನ ಆರೋಪದ ಮೇಲೆ ಹತ್ಯೆ ಪ್ರಕರಣ ದಾಖಲಿಸಿದ್ದಾರೆ. ಸುಪಾರಿ ಪಡೆದ ಇಬ್ಬರು ಆರೋಪಿಗಳನ್ನೂ ವಶಕ್ಕೆ ತೆಗೆದುಕೊಂಡು ಜೈಲಿಗೆ ಕಳುಹಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.