ಅತ್ಯಾಚಾರ ಹಾಗು ಕೊಲೆ ಪ್ರಕರಣದಲ್ಲಿ ಪೊಲೀಸರ ಅತಿಥಿಗಳಾಗಿದ್ದ ಇಬ್ಬರನ್ನು ಠಾಣೆಯಿಂದ ಹೊರಗೆಳೆದ ಸಾರ್ವಜನಿಕರು ಹಿಗ್ಗಾ ಮುಗ್ಗಾ ಥಳಿಸಿ ಕೊಂದ ಘಟನೆ ಸೋಮವಾರದಂದು ಅರುಣಾಚಲ ಪ್ರದೇಶದ ಲೋಹಿತ್ ಜಿಲ್ಲೆಯಲ್ಲಿ ನಡೆದಿದೆ.
ಅಸ್ಸಾಂನ ಟೀ ತೋಟದಲ್ಲಿ ಕಾರ್ಮಿಕರಾಗಿರುವ 30 ವರ್ಷದ ಸಂಜಯ್ ಸೊಬೊರ್ ಮತ್ತು 25 ವರ್ಷದ ಜಗದೀಶ್ ಲೋಹರ್ ಎಂಬುವವರನ್ನು ಜನರ ಗುಂಪು ಪೊಲೀಸ್ ಠಾಣೆಯಿಂದ ಮಾರುಕಟ್ಟೆ ಪ್ರದೇಶಕ್ಕೆ ಏಳೆದು ಪೊಲೀಸರ ಎದುರೇ ತಳಿಸಿ ಕೊಂದಿದ್ದಾರೆ. ನಂತರ ಅವರ ದೇಹಗಳನ್ನು ಮಾರುಕಟ್ಟೆ ಪ್ರದೇಶದಲ್ಲಿ ಎಸೆಯಲಾಗಿದೆ. ಆರೋಪಿಗಳಿಗೆ ಬೆಂಕಿ ಹಚ್ಚಲು ಮುಂದಾದ ಜನರ ಗುಂಪನ್ನು ಭದ್ರತಾ ಸಿಬ್ಬಂದಿಯವರು ತಡೆದರು.
ಫೆಬ್ರವರಿ 12 ರಂದು, ವಾಕ್ರೊ ಪೊಲೀಸ್ ಠಾಣೆಯ ಅಡಿಯಲ್ಲಿ ಐದುವರೆ ವರ್ಷದ ಹುಡುಗಿ ಹಳ್ಳಿಯಿಂದ ಕಾಣೆಯಾಗಿದ್ದಳು. ನಂತರ, ಮಗುವಿನ ಸಂಬಂಧಿಗಳು ರುಂಡರಹಿತ ಮತ್ತು ಅಂಗಹೀನಗೊಂಡ ದೇಹವನ್ನು ನಾಮ್ಗೊ ಗ್ರಾಮದ ಕಾಡಿನಲ್ಲಿರುವ ಕೊಳವೊಂದರ ಬಳಿ ಪತ್ತೆ ಮಾಡಲಾಯಿತು.
ನಂತರ, ಅತ್ಯಾಚಾರ ಮತ್ತು ಬಾಲಕಿಯ ಕೊಲೆಯ ಅನುಮಾನದ ಮೇಲೆ ಸೊಬೊರ್ ಮತ್ತು ಲೋಹರ್ ಎಂಬುವವರನನ್ನು ಬಂಧಿಸಲಾಯಿತು. ಇಬ್ಬರು ಅಪರಾಧವನ್ನು ಒಪ್ಪಿಕೊಂಡಿದ್ದರು. ಮತ್ತು ಇಬ್ಬರನ್ನು ಕೋರ್ಟ್‌ಗೆ ಹಾಜರು ಮಾಡಲಾಗಿತ್ತು.
ಪ್ರಕರಣದಲ್ಲಿ ಕೆಲ ಅನಾಮಧೇಯ ವ್ಯಕ್ತಿಗಳ ಮೇಲೆ ಪೊಲೀಸರು ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೆತ್ತಿಕೊಂಡಿದ್ದರು. ಇದೇ ಸಂಬಂಧ ಮೂರು ಪೇದೆಗಳನ್ನು ಸೇವೆಯಿಂದ ವಜಾಗೊಳಿಸಲಾಗಿದೆ.
2015 ರಲ್ಲಿ ಇಂಥದ್ದೇ ಪ್ರಕರಣದಲ್ಲಿ ನಾಗಾಲ್ಯಾಂಡ್‌ನ ದಿಮಾಪುರ ಕೇಂದ್ರ ಕಾರಾಗೃಹದಲ್ಲಿದ್ದ ಅತ್ಯಾಚಾರ ಆರೋಪಿಯನ್ನು ಜನರ ಗುಂಪೊಂದು ಹೊರಗೆಳೆದು ಕೊಲೆ ಮಾಡಿತ್ತು.