ಹೈದರಾಬಾದ್ : ತನ್ನ ಕಿರುಕುಳಕ್ಕೆ ಪತ್ನಿ ದೂರವಾದಳು ಎಂದು ಖಿನ್ನತೆಗೆ ಒಳಗಾದ ವ್ಯಕ್ತಿ ಹುಸಿ ಬಾಂಬ್ ಕರೆ ಮಾಡಿದ್ದು, ಆತನನ್ನು ಕೆಲವೇ ಗಂಟೆಗಳಲ್ಲಿ ಪೊಲೀಸರು ಪತ್ತೆಹಚ್ಚಿ, ಬಂಧಿಸಿದ್ದಾರೆ.
ಹುಸಿ ಬಾಂಬ್ ಬೆದರಿಕೆ ಹಾಕಿದ್ದಕ್ಕೆ ಹೈದರಾಬಾದ್ನ ಸ್ಥಳೀಯ ನ್ಯಾಯಾಲಯ ಆತನಿಗೆ 18 ದಿನಗಳ ಕಾಲ ಜೈಲು ಶಿಕ್ಷೆ ವಿಧಿಸಿದೆ.
ವರದಿಗಳ ಪ್ರಕಾರ ಆರೋಪಿ ಸಂತೋಷನಗರದ ಮೊಹಮ್ಮದ್ ಅಕ್ಬರ್ ಖಾನ್ ತನ್ನ ಪತ್ನಿ ತನ್ನನ್ನು ಬಿಟ್ಟು ತವರುಮನೆಗೆ ಹೋಗಿದ್ದಕ್ಕೆ ಮಂಗಳವಾರ ರಾತ್ರಿ ಕಂಠಪೂರ್ತಿ ಕುಡಿದಿದ್ದಾನೆ.
ಬಳಿಕ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿ, ಮಂದಿರ-ಮಸೀದಿ ಜಂಕ್ಷನ್ ಬಳಿ ಬಾಂಬ್ ಇಡಲಾಗಿದೆ ಎಂದು ಮಾಹಿತಿ ನೀಡಿದ್ದಾನೆ.
ತಕ್ಷಣ ಬಾಂಬ್ ನಿಷ್ಕ್ರಿಯ ದಳದೊಂದಿಗೆ ಸ್ಥಳಕ್ಕಾಗಮಿಸಿದ ಅಧಿಕಾರಿಗಳು ಸ್ಥಳವನ್ನು ತೆರವುಗೊಳಿಸಿ ತಪಾಸಣೆ ಆರಂಭಿಸಿದ್ದಾರೆ. ಒಂದೆರಡು ಗಂಟೆಗಳ ಕಾಲ ಸ್ಥಳದಲ್ಲಿ ಉದ್ವಿಗ್ನತೆ ಉಂಟಾಗಿದ್ದು, ಬಳಿಕ ಯಾವುದೇ ಸ್ಫೋಟಕ ವಸ್ತುಗಳು ಪತ್ತೆಯಾಗದ ಕಾರಣ ಹುಸಿ ಬಾಂಬ್ ಕರೆ ಎಂದು ದೃಢಪಟ್ಟಿದೆ.