ಶ್ರೀನಗರ:ಜಮ್ಮು-ಕಾಶ್ಮೀರದ ಅಂತರಾಷ್ಟ್ರೀಯ ಗಡಿ ಭಾಗದಲ್ಲಿ ಪಾಕಿಸ್ತಾನ ಸೇನೆ ಮತ್ತೆ ಕದನ ವಿರಾಮ ಉಲ್ಲಂಘನೆ ಮಾಡಿದ್ದು, ಪಾಕ್ ಪಡೆಗಳು ನಡೆಸಿದ ಗುಂಡಿನ ದಾಳಿಗೆ ಓರ್ವ ಭಾರತೀಯ ಯೋಧ ಹಾಗೂ ಓರ್ವ ಅಮಾಯಕ ಬಾಲಕಿ ಸಾವನ್ನಪ್ಪಿದ್ದಾರೆ.
ರಜೌರಿ ಸೆಕ್ಟರ್ ಹಾಗೂ ಪೂಂಚ್ ಜಿಲ್ಲೆಗಳಲ್ಲಿ ಪಾಕ್ ಪಡೆಗಳು ಕದನ ವಿರಾಮ ಉಲ್ಲಂಘಿಸಿದ್ದು, ಬೆಳಿಗ್ಗೆಯಿಂದಲೇ ಭಾರತೀಯ ಸೇನಾಪಡೆಗಳ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ರಜೌರಿಯಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಜಮ್ಮು-ಕಾಶ್ಮೀರದ ತ್ರಾಲ್ ಮೂಲದ ಯೋಧ ನಾಯಕ್ ಮುದ್ದಾಸರ್ ಅಹ್ಮದ್ ಹುತಾತ್ಮರಾಗಿದ್ದಾರೆ.
ಇದೇ ವೇಳೆ ಪೂಂಜ್ ಪ್ರದೇಶವನ್ನು ಗುರಿಯಾಗಿರಿಸಿ ಪಾಕ್ ಪಡೆ ನಡೆಸಿದ ಗುಂಡಿನ ದಾಳಿಯಲ್ಲಿ ಬಾಲಕಿಯೊಬ್ಬಳು ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿದ್ದಾರೆ. ಮೃತಪಟ್ಟ ಬಾಲಕಿಯನ್ನು ಪೂಂಜ್ ಜಿಲ್ಲೆಯ ಬಾಲಕೋಟ್ ನ 7 ವರ್ಷದ ಸೈದಾ ಎಂದು ಗುರುತಿಸಲಾಗಿದೆ.