ನಾಲ್ಕು ವರ್ಷದ ಬಾಲಕಿಯೊಬ್ಬಳು ಅಪಾರ್ಟ್‌ಮೆಂಟ್‌ನ 10 ನೇ ಮಹಡಿಯಿಂದ ಬಿದ್ದು ಮೃತಪಟ್ಟಿರುವ ಘಟನೆ ಉತ್ತರಪ್ರದೇಶ ರಾಜ್ಯದ ಘಾಜಿಯಾಬಾದ್‌ನಲ್ಲಿರುವ ಇಂದಿರಾಪುರಂ ರೆಸಿಡೆನ್ಸಿಯಲ್ ಸೊಸೈಟಿ ವಲಯದಲ್ಲಿ ನಡೆದಿದೆ.
ಮೃತಪಟ್ಟಿರುವ ಬಾಲಕಿಯ ಹೆಸರು ಮೈರಾ ಸಚಿದೇವ್ ಆಗಿದ್ದು, ಮನೆಯ ಬಾಲ್ಕನಿಯಲ್ಲಿ ಆಟವಾಡುತ್ತಿದ್ದಾಗ ಈ ದುರಂತ ಸಂಭವಿಸಿದೆ ಎಂದು ಹೇಳಲಾಗಿದೆ. ಈ ಘಟನೆ ಸಂಭವಿಸಿದ ತತ್‌ಕ್ಷಣ ಸ್ಥಳೀಯರು ಬಾಲಕಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತಾದರೂ ಆಸ್ಪತ್ರೆ ತಲುಪುವಷ್ಟರಲ್ಲೇ ಮಗು ಮೃತಪಟ್ಟಿರುವುದಾಗಿ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.
ಮನಿಷ್ ಸಚಿದೇವಾ ಈ ಬಾಲಕಿಯ ತಂದೆಯಾಗಿದ್ದು ಈತ ತನ್ನ ಕುಟುಂಬದವರೊಡನೆ ಜೈಪುರಿಯಾ ಸನ್‌ರೈಸ್ ಗ್ರೀನ್ಸ್ ಅಪಾರ್ಟಮೆಂಟ್‌ನ 10 ನೇ ಮಹಡಿಯಲ್ಲಿರುವ ಪ್ಲಾಟ್ ಸಂಖ್ಯೆ 1002 ರಲ್ಲಿ ವಾಸಿಸುತ್ತಿದ್ದ ಎನ್ನಲಾಗಿದೆ. ಈ ಘಟನೆ ನಡೆದ ವೇಳೆ ಆ ಮಗುವಿನ ತಾಯಿ ತನ್ನ ಹಿರಿಯ ಮಗಳನ್ನು ಟ್ಯೂಶನ್ ಕ್ಲಾಸ್‌ನಿಂದ ಕರೆತರಲು ಹೊರ ಹೋಗಿದ್ದು, ಮನೆಯಲ್ಲಿ ಯಾರು ಇಲ್ಲದಿರುವ ವೇಳೆ ಈ ದುರಂತ ಸಂಭವಿಸಿದೆ ಎನ್ನಲಾಗಿದೆ.
ಅಷ್ಟೇ ಅಲ್ಲ ಮನೆಯ ಬಾಲ್ಕನಿಯಲ್ಲಿದ್ದ ಸ್ಟೂಲ್ ಈ ದುರಂತಕ್ಕೆ ಮುಖ್ಯ ಕಾರಣವಾಗಿದ್ದು, ಆಟವಾಡುತ್ತಾ ಬಾಲ್ಕನಿಗೆ ತೆರಳಿದ ಬಾಲಕಿ, ಆ ಸ್ಟೂಲನ್ನು ಹತ್ತಿ ಕೆಳಕ್ಕೆ ಬಗ್ಗಿದಾಗ ಆಯ ತಪ್ಪಿ ಕೆಳಕ್ಕೆ ಬಿದ್ದಿದ್ದಾಳೆ ಎಂದು ಹೇಳಲಾಗುತ್ತಿದೆ.
ಪೋಷಕರ ನಿರ್ಲಕ್ಷತೆಯೇ ಈ ದುರಂತಕ್ಕೆ ಪ್ರಮುಖ ಕಾರಣವಾಗಿದ್ದು ಈ ಕುರಿತಂತೆ ಹುಡುಗಿಯ ಪೋಷಕರು ಯಾವುದೇ ಹೇಳಿಕೆಯನ್ನು ನೀಡುತ್ತಿಲ್ಲ. ಈ ಘಟನೆಯ ಕುರಿತು ತನಿಖೆಯನ್ನು ಆರಂಭಿಸಿರುವ ಪೊಲೀಸರು ಈ ಘಟನೆಯ ಕುರಿತಾಗಿರುವ ಸಾಕ್ಷಿಗಳು ಮತ್ತು ಸೆಕ್ಯೂರಿಟಿ ಗಾರ್ಡ್‌ರನ್ನು ಪ್ರಶ್ನಿಸಿ ಮಾಹಿತಿಯನ್ನು ಕಲೆಹಾಕುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.