ಹಣ ವಸೂಲಿಗಾಗಿ ಕಂಪನಿಯೊಂದರ ಮೇಲೆ ನಕಲಿ ದಾಳಿ ನಡೆಸಿದ್ದಕ್ಕಾಗಿ ನಾಲ್ವರು ಸಿಬಿಐ ಅಧಿಕಾರಿಗಳನ್ನು ಬಂಧಿಸಲಾಗಿದೆ.
ಸಿಬಿಐನಲ್ಲಿ ಸಬ್ ಇನ್ ಸ್ಪೆಕ್ಟರ್ ಗಳಾಗಿ ಕಾರ್ಯ ನಿರ್ವಹಿಸುತ್ತಿದ್ದ ಸುಮಿತ್ ಗುಪ್ತ, ಪ್ರದೀಪ್ ರಾಣಾ, ಅಂಕುರ್ ಕುಮಾರ್ ಮತ್ತು ಆಕಾಶ್ ಅಲವತ್ ಅವರನ್ನು ಬಂಧಿಸಲಾಗಿದೆ. ಈ ಘಟನೆ ಬೆನ್ನಲ್ಲೇ ಸಿಬಿಐ ತನ್ನ ನಾಲ್ವರು ಸಬ್ ಇನ್ ಸ್ಪೆಕ್ಟರ್ ಗಳನ್ನು ಸೇವೆಯಿಂದ ವಜಾಗೊಳಿಸಿದೆ.
ಚಂಡೀಗಢ ಮೂಲದ ಉದ್ಯಮಿ ತನ್ನ ಕಂಪನಿ ಮೇಲೆ ದಾಳಿ ನಡೆಸಿದ್ದೂ ಅಲ್ಲದೇ ಹಣ ನೀಡುವಂತೆ ಬ್ಲಾಕ್ ಮಾಡುತ್ತಿರುವ ಅಧಿಕಾರಿಗಳ ಬಗ್ಗೆ ಮೇಲಾಧಿಕಾರಿಗಳಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಪ್ರಕರಣ ಬೆಳಕಿಗೆ ಬಂದಿದೆ.
ನಾಲ್ವರು ಪೊಲೀಸ್ ಅಧಿಕಾರಿಗಳು ಸೇರಿದಂತೆ ೬ ಮಂದಿಯ ತಂಡ ನನ್ನ ಕಚೇರಿಯ ಮೇಲೆ ದಾಳಿ ಮಾಡಿದ್ದು, ಭಯೋತ್ಪಾದಕರಿಗೆ ಹಣ ಪೂರೈಸುತ್ತಿರುವ ಆರೋಪದಲ್ಲಿ ದಾಳಿ ಮಾಡಲಾಗಿದ್ದು, ನಮಗೆ ಹಣ ನೀಡದಿದ್ದಲ್ಲಿ ಬಂಧಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ದೂರು ನೀಡಿದ್ದರು.
ನನ್ನನ್ನು ಬಲವಂತವಾಗಿ ಕಾರಿನಲ್ಲಿ ಕೂರಿಸಿಕೊಂಡು ದೂರು ದಾಖಲಿಸಿದ್ದೂ ಅಲ್ಲದೇ ೨೫ ಲಕ್ಷ ರೂ. ವಸೂಲಿ ಮಾಡಿದ್ದಾಗಿ ಉದ್ಯಮಿ ದೂರಿನಲ್ಲಿ ವಿವರಿಸಿದರು.