ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರಿಗಿಂತ ಅವರ 18 ತಿಂಗಳ ಮೊಮ್ಮಗ ಹೆಚ್ಚು ಶ್ರೀಮಂತರಂತೆ. ಹೌದು ಇದು ಸತ್ಯ. ನಾಯ್ಡು ಪುತ್ರ, ದೇವಾಂಶ ತಂದೆ, ತೆಲುಗು ದೇಶಂ ಪ್ರಧಾನ ಕಾರ್ಯದರ್ಶಿ ನಾರಾ ಲೋಕೇಶ್ ಬುಧವಾರ ಕುಟುಂಬದ ಆಸ್ತಿ ವಿವರವನ್ನು ಘೋಷಿಸಿದ್ದು, ಸಿಎಂ ನಾಯ್ಡು ಅವರಿಗಿಂತ ಅವರ ಮೊಮ್ಮಗನೇ ಹೆಚ್ಚು ಆಸ್ತಿ ಹೊಂದಿರುವುದು ಬಹಿರಂಗವಾಗಿದೆ.
ಹಳೆಯ ಅಂಬಾಸಿಡರ್ ಕಾರ್ ಒಳಗೊಂಡಂತೆ ಚಂದ್ರಬಾಬು ನಾಯ್ಡು ಅವರ ಒಟ್ಟು ಆಸ್ತಿ 3.73 ಕೋಟಿ ಜತೆಗೆ 3.6 ಕೋಟಿ ಸಾಲ ಕೂಡ ಇದೆ, ದೇವಾಂಶ ಹೊಂದಿರುವ ಒಟ್ಟು ಆಸ್ತಿ 11.57 ಕೋಟಿ.
ದೇವಾಂಶು ಅಜ್ಜಿ, ಚಂದ್ರಬಾಬು ನಾಯ್ಡು ಪತ್ನಿ ಭುವನೇಶ್ವರಿಯಿಂದ 9.17 ಕೋಟಿ ಮತ್ತು ತಾಯಿಯ ತಂದೆ, ನಟ ಬಾಲಕೃಷ್ಣ ಅವರಿಂದ 2.4 ಕೋಟಿ ರೂಪಾಯಿ ಆಸ್ತಿಯನ್ನು ಪಡೆದಿದ್ದಾನೆ.
ಲೋಕೇಶ್ ಅವರು ಮಾಧ್ಯಮಗಳಿಗೆ ನೀಡಿರುವ ಮಾಹಿತಿ ಪ್ರಕಾರ ಹೈದರಾಬಾದಿನ ಜುಬಿಲಿ ಹಿಲ್ಸ್‌ನಲ್ಲಿರುವ ಅವರ ತಂದೆಯ ನಿವಾಸದ ಮೌಲ್ಯ 3.68ಕೋಟಿ, ಹಳೆಯ ಅಂಬಾಸಿಡರ್ ಕಾರ್ ಬೆಲೆ 1.52ಲಕ್ಷ. ಬ್ಯಾಂಕ್ ಖಾತೆಯಲ್ಲಿರುವ ಹಣ 3.59 ಲಕ್ಷ ರೂಪಾಯಿ.
ನಾಯ್ಡು ಪತ್ನಿ ಭುವನೇಶ್ವರಿ ಅವರು 38.66 ಕೋಟಿ ಆಸ್ತಿ, 13 ಕೋಟಿ ಸಾಲ, ನಾರಾ ಲೋಕೇಶ್ 14.50 ಕೋಟಿ ಆಸ್ತಿ, 6.35ಕೋಟಿ ಸಾಲ, ಲೋಕೇಶ್ ಪತ್ನಿ ಬ್ರಹ್ಮಿಣಿ 5.4 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದಾರೆ.
ನಾಯ್ಡು ಕುಟುಂಬ ಹೆರಿಟೇಜ್ ಫುಡ್ಸ್ ಉದ್ಯಮವನ್ನು ನಡೆಸುತ್ತಿದ್ದು ಇದರ ವಾರ್ಷಿಕ ವಹಿವಾಟು 2,321 ಕೋಟಿ. ಪ್ರಸಕ್ತ ವರ್ಷ ಕಂಪನಿ ಗಳಿಸಿರುವ ಲಾಭ 55ಕೋಟಿ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ