ದೇಶದ 101 ಜಿಲ್ಲೆಗಳು ಬಯಲು ಶೌಚಮುಕ್ತ ಎಂದು ಕೇಂದ್ರ ಸರ್ಕಾರ ಘೋಷಿಸಿದ್ದು, ಈ ಪೈಕಿ ಕರ್ನಾಟಕದ ಐದು ಜಿಲ್ಲೆಗಳಾದ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮಂಗಳೂರು, ಉಡುಪಿ ಮತ್ತು ಕೊಡಗು ಜಿಲ್ಲೆಗಳು ಸೇರಿವೆ.
ಪ್ರಧಾನಿ ನರೇಂದ್ರ ಮೋದಿ ಅವರ ಮಹಾತ್ವಾಕಾಂಕ್ಷೆಯ ಸ್ವಚ್ತತಾಭಾರತ ಅಂದೋಲನಕ್ಕೆ ಜನರು ಸ್ಪಂದಿಸುತ್ತಿದ್ದು 101 ಜಿಲ್ಲೆಗಳು ಬಯಲು ಶೌಚ ಮುಕ್ತಗೊಂಡಿರುವುದು ಅದಕ್ಕೆ ಸಾಕ್ಷಿಯಾಗಿದೆ ಎಂದು ಕೇಂದ್ರ ಕುಡಿಯುವ ನೀರು ಹಾಗೂ ನೈರ್ಮಲ್ಯ ಖಾತೆ ರಾಜ್ಯ ಸಚಿವ ರಮೇಶ್ ಜಿಗಜಿಣಗಿ ಹೇಳಿದ್ದಾರೆ.
ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಬಯಲು ಶೌಚ ಮುಕ್ತ ಯೋಜನೆಗೆ ಕೇರಳ, ತೆಲಂಗಾಣ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಉತ್ತಮ ಪ್ರತಿಕ್ರಿಯೆ ಕಂಡುಬರುತ್ತಿದೆ. ಇದು ಸಂತೋಷದ ವಿಷಯ. ಆದರೆ ದೇಶದಲ್ಲಿ 11ಕೋಟಿ ಜನರು ಇಂದಿಗೂ ಶೌಚಾಲಯಗಳನ್ನು ಹೊಂದಿಲ್ಲ. ಈ ಹಿನ್ನೆಲೆಯಲ್ಲಿ ದೇಶದಾದ್ಯಂತ 3.5ಕೋಟಿ ಶೌಚಾಲಯಗಳನ್ನು ನಿರ್ಮಿಸಲಾಗುವುದು, ಎಂದು ತಿಳಿಸಿದ್ದಾರೆ.
ಸ್ವಚ್ಛಭಾರತ ಯೋಜನೆ 64% ಯಶ ಕಂಡಿದೆ. 2019ರ ಗಾಂಧಿ ಜಯಂತಿ ಒಳಗಡೆ ದೇಶವನ್ನು ಬಯಲು ಶೌಚ ಮುಕ್ತ ರಾಷ್ಟ್ರವೆಂದು ಘೋಷಿಸುವ ಮಹಾತ್ವಾಕಾಂಕ್ಷೆ ಸರ್ಕಾರಕ್ಕಿದೆ ಎಂದು ಅವರು ಹೇಳಿದ್ದಾರೆ.