ಶಿಮ್ಲಾ: ತುಂಬಿ ಹರಿಯುತ್ತಿರುವ ಡ್ಯಾಂ ನಡುವೆ ಐವರು ಅರಣ್ಯ ಇಲಾಖೆ ಸಿಬ್ಬಂದಿ ಸೇರಿ 10 ಜನ ಸಿಲುಕಿಕೊಂಡಿರುವ ಘಟನೆ ಹಿಮಾಚಲ ಪ್ರದೇಶದ ಮಂಡಿಯ ಕೋಲ್ ಡ್ಯಾಮ್ ಹೈಡಲ್ ಪ್ರಾಜೆಕ್ಟ್ನಲ್ಲಿ ನಡೆದಿದೆ.
ಭಾರೀ ಮಳೆಯಿಂದ ಉತ್ತರಖಂಡ ಹಾಗೂ ಹಿಮಾಚಲ ಪ್ರದೇಶ ತತ್ತರಿಸಿದೆ. ಇದರಿಂದ ನದಿ ಪಾತ್ರಗಳಿಗೆ ಹಾಗೂ ಆಣೆಕಟ್ಟಿನ ಸಮೀಪ ಜನರು ತೆರಳದಂತೆ ಎಚ್ಚರಿಕೆ ನೀಡಲಾಗಿದೆ. ಆದರೂ ಈ ಹತ್ತು ಜನ ಹೇಗೆ ಅಲ್ಲಿ ಸಿಲುಕಿದ್ದಾರೆ ಎಂಬುದು ತಿಳಿದು ಬಂದಿಲ್ಲ. ಅವರ ರಕ್ಷಣೆಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅಲ್ಲಿನ ಜಿಲ್ಲಾಧಿಕಾರಿ ಅರಿಂದಮ್ ಚೌಧರಿ ತಿಳಿಸಿದ್ದಾರೆ.
ಸ್ಥಳೀಯ ಆಡಳಿತ ಮತ್ತು ನಿವಾಸಿಗಳ ಸಹಾಯದಿಂದ ಎನ್ಡಿಆರ್ಎಫ್ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದಾರೆ. ಅಲ್ಲದೇ ಪರಿಣಿತ ಈಜುಗಾರರನ್ನು ಕರೆಸಲಾಗಿದೆ. ಘಟನೆಯ ಬ್ಗಗೆ ಸಿಲುಕಿದ್ದವರ ರಕ್ಷಣೆ ಬಳಿಕ ಸಂಪೂರ್ಣ ಮಾಹಿತಿ ದೊರೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.