ಕಾರ್ಖಾನೆ ಮತ್ತು ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುವ ಕಾರ್ಮಿಕರ ಪಿ.ಎಫ್. ವಂತಿಗೆಯನ್ನು ಮೂರು ತಿಂಗಳವರೆಗೆ ಕೇಂದ್ರ ಸರ್ಕಾರ ಭರಿಸಲಿದೆ.
ಒಂದು ನೂರು ಅಥವಾ ಅದಕ್ಕಿಂತ ಕಡಿಮೆ ಉದ್ಯೋಗಿಗಳನ್ನು ಹೊಂದಿರುವ ಕಾರ್ಖಾನೆ ಮತ್ತು ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುವ ಕಾರ್ಮಿಕರ ಪಿ.ಎಫ್. ವಂತಿಗೆಯನ್ನು ಕೇಂದ್ರ ಸರ್ಕಾರ ಭರಿಸಲಿದೆ. ಹೀಗಂತ ಕಲಬುರಗಿ ಪ್ರಾದೇಶಿಕ ಪಿ.ಎಫ್ ಕಚೇರಿ ಸಹಾಯಕ ಆಯುಕ್ತ ಸುಪ್ರತಿಕ ದಾಶ ತಿಳಿಸಿದ್ದಾರೆ.
ಪ್ರತಿಶತ 90 ರಷ್ಟು ಉದ್ಯೋಗಿಗಳ ತಿಂಗಳ ವೇತನ 15,000 ರೂ. ಗಿಂತ ಕಡಿಮೆ ಇರಬೇಕು. ಪ್ರತಿಶತ 100 ಉದ್ಯೋಗಿಗಳ ಕೆ.ವೈ.ಸಿ ಮತ್ತು ಉದ್ಯೋಗದಾತರ ಪೂರ್ಣ ಮಾಹಿತಿ ಎಲೆಕ್ಟ್ರಾನಿಕ್ ಮುಖಾಂತರ (ಪಾರ್ಮ- 5ಎ) ನಮೂದಿಸಿರಬೇಕು. ಇಂತಹ ಉದ್ಯೋಗಿಗಳ ವೇತನದ ಶೇ. 24 ರಷ್ಟು ಪಿ.ಎಫ್. ವಂತಿಗೆಯನ್ನು ಕೇಂದ್ರ ಸರ್ಕಾರವು ಮೂರು ತಿಂಗಳವರೆಗೆ ಪಾವತಿಸಲಿದೆ.
ಪರಿಹಾರ ಪ್ರಕ್ರಿಯೆ ಮತ್ತು ಕಾರ್ಯವಿಧಾನಗಳನ್ನು ಒಳಗೊಂಡ ತಂತ್ರಾಂಶವನ್ನು ಇಪಿಎಫ್‍ಓ ಎಲೆಕ್ಟ್ರಾನಿಕ್ ಚಲನ್-ಕಮ್-ರಿಟರ್ನ (ಇ.ಸಿ.ಆರ್) ವ್ಯವಸ್ಥೆ ಜಾರಿಗೊಳಿಸಿದೆ. ಈ ವ್ಯವಸ್ಥೆಯು ಸಂಬಂಧಪಟ್ಟ ಕಾರ್ಖಾನೆಗಳು ಮತ್ತು ಸಂಸ್ಥೆಗಳು ತಮ್ಮ ಉದ್ಯೋಗಿಗಳಿಗೆ ಪರಿಹಾರವನ್ನು ಪಡೆಯಲು ಅನುಕೂಲವಾಗಲಿದೆ. ಹೆಚ್ಚಿನ ಮಾಹಿತಿಗಾಗಿ ಇ.ಪಿ.ಎಫ್.ಓ ಕೋವಿಡ-19 ಟ್ಯಾಬ್‍ನಲ್ಲಿ ಗಮನಿಸಬಹುದಾಗಿದೆ. ಈಗಾಗಲೇ ಭವಿಷ್ಯ ನಿಧಿ ಕಚೇರಿಯ ಮುಖಾಂತರ ಅರ್ಹ ಉದ್ಯೋಗದಾತರಿಗೆ ಇ-ಮೇಲ್ ಮೂಲಕ ಸಂದೇಶವನ್ನು ರವಾನಿಸಲಾಗಿದೆ ಎಂದಿದ್ದಾರೆ.