ರಾಜ್ಯದಲ್ಲಿ ಯಾವಾಗ ಚುನಾವಣೆ ಬಂದರೂ ನನ್ನ ಕಣ್ಣು 44 ಕ್ಷೇತ್ರಗಳ ಮೇಲೆ ಇರುತ್ತದೆ. ಹೀಗಂತ ಬಿಜೆಪಿ ರಾಜ್ಯಾಧ್ಯಕ್ಷ ಪರೋಕ್ಷವಾಗಿ ಜೆಡಿಎಸ್ ಶಾಸಕರಿಗೆ ಟಾಂಗ್ ನೀಡಿದ್ದಾರೆ.
ಬೆಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹೇಳಿಕೆ ನೀಡಿದ್ದು, ಸಮ್ಮಿಶ್ರ ಸರ್ಕಾರ ಇದ್ದ ರಾಜ್ಯದಲ್ಲಿ ಬಿಜೆಪಿಗೆ 25+1 ಸ್ಥಾನ ಕಾರ್ಯಕರ್ತರಿಂದ ಬಂದಿದೆ.
ಇಂದು ಅನಂತಕುಮಾರ್ ಬದುಕಿರಬೇಕಾಗಿತ್ತು. ಯಾರೂ ಇಲ್ಲದೇ ಇದ್ದ ಸಮಯದಲ್ಲಿ ನಾವು ಇಬ್ಬರು ರಾಜ್ಯಾದ್ಯಂತ ಓಡಾಡಿ ಪಕ್ಷ ಕಟ್ಟಿದ್ದೇವೆ. ಬೆಂಗಳೂರಿನಲ್ಲಿ ನಾವು 11 ವಿಧಾನಸಭೆ ಕ್ಷೇತ್ರ ಮಾತ್ರ ಗೆದ್ದಿದ್ದೇವೆ. ಬೆಂಗಳೂರಿನ ಸಂಸದರು ಇವತ್ತೇ ನಿರ್ಧಾರ ಮಾಡಿ, ಯಾವಾಗ ಚುನಾವಣೆ ಬಂದರೂ 21 ಕ್ಕಿಂತ ಹೆಚ್ಚು ಸ್ಥಾನ ಗೆಲ್ಲುವ ಬಗ್ಗೆ ನಿರ್ಧಾರ ಮಾಡಿ ಎಂದರು.
44 ವಿಧಾನಸಭಾ ಕ್ಷೇತ್ರಗಳ ಕಡೆ ನಾನು ಹೆಚ್ಚು ಗಮನ ಕೊಡಲು ಪ್ರಾರಂಭಿಸಿದ್ದೇನೆ. ಸಂಸತ್ ಅಧಿವೇಶನ ಮುಗಿದ ಬಳಿಕ ಸಂಸದರು ಸದಸ್ಯತ್ವ ಅಭಿಯಾನದಲ್ಲಿ ತೊಡಗಿಸಿಕೊಳ್ಳಬೇಕು. ಅನಂತಕುಮಾರ್ ಪ್ರಯತ್ನದಿಂದ ಸಬ್ ಅರ್ಬನ್ ರೈಲಿಗೆ 17 ಸಾವಿರ ಕೋಟಿ ಬಜೆಟ್ ನಲ್ಲಿ ಸೇರಿದೆ.
ಆದರೆ ಒಂದೇ ಒಂದು ಕೊರಗು ಇದೆ. ಇಂತಹ ಸಂದರ್ಭದಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇರಬೇಕಾಗಿತ್ತು. ಯಾವನು ಇದ್ದಾನೆ ವಿಧಾನಸೌಧದಲ್ಲಿ ಕೆಲಸ ಮಾಡೋನು? ಮೋದಿಗೆ ವೋಟ್ ಹಾಕಿದೀರಾ ಅವರ ಬಳಿಯೇ ಹೋಗಿ ಅಂತಾ ಸೊಕ್ಕಿನ ಮಾತಾಡುವವರಿಗೆ ಜನ ಉತ್ತರ ಕೊಡ್ತಾರೆ ಅಂತ ಸಿಎಂ ವಿರುದ್ಧ ಯಡಿಯೂರಪ್ಪ ಕಿಡಿಕಾರಿದ್ರು.