ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡ್ನಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿದ್ದು, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಆತಂಕದ ವಾತಾವರಣ ಸೃಷ್ಠಿಯಾಗಿದೆ. ದೆಹಲಿ ಜನತೆಯ ಆತಂಕ ಹೆಚ್ಚಾಗಲು ಕಾರಣ ಯಮುನೆ. ಹೌದು, ಕಳೆದ ತಿಂಗಳಿನಲ್ಲಿ ಸುರಿದ ಭಾರೀ ಮಳೆಯಿಂದಾಗಿ ಯಮುನೆ ಅಪಾಯದ ಮಟ್ಟ ಮೀರಿ ಹರಿದು ದೆಹಲಿಗೆ ತನ್ನ ಪಾತ್ರವನ್ನ ತಿಳಿಸಿತ್ತು. ಇದೀಗ ಉತ್ತರದಲ್ಲಿ ಮತ್ತೆ ಮೇಘಸ್ಫೋಟವಾಗಿದ್ದು, ಯಮುನಾ ನದಿಯ ನೀರಿನ ಮಟ್ಟ ದಿಢೀರ್ ಹೆಚ್ಚಾಗಿದೆ ಎಂದು ಕೇಂದ್ರ ಜಲ ಆಯೋಗ ಮಾಹಿತಿ ನೀಡಿದೆ. ಜಲ ಆಯೋಗದ ಮಾಹಿತಿ ಬಳಿಕ ಎಚ್ಚೆತ್ತ ದೆಹಲಿ ಸರ್ಕಾರ ತಗ್ಗು ಪ್ರದೇಶದ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ಸೂಚನೆ ನೀಡಿದೆ. ಜುಲೈನಲ್ಲಿ ಉಂಟಾದ ಸನ್ನಿವೇಶ ಮತ್ತೆ ಉದ್ಭವಿಸಬಾರದೆಂದು ಸರ್ಕಾರ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದು, ಯಮುನಾ ನದಿಯ ಅಕ್ಕ ಪಕ್ಕದ ಪ್ರದೇಶಗಳಲ್ಲಿ ಅಗತ್ಯ ಕ್ರಮ ಕೈಗೊಳ್ಳಿ ಎಂದು ತಿಳಿಸಿದೆ.