ವಿಶ್ವಪಾರಂಪರಿಕ ತಾಣ ಹಂಪಿಯಲ್ಲಿ ವಿಶ್ವದ ಗಮನ ಸೆಳೆಯುಂತಹ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಯೋಜಿಸುವಲ್ಲಿ ನಾವೆಲ್ಲರೂ ಯಶಸ್ವಿಯಾಗಿದ್ದೇವೆ. ಸುಂದರ ಬದುಕಿಗೆ ಯೋಗ ಅತ್ಯುತ್ತಮ ಸಾಧನವಾಗಿದ್ದು, ಇದನ್ನು ದಿನನಿತ್ಯ ಜೀವನದಲ್ಲಿ ಅಳವಡಿಸಕೊಳ್ಳಬೇಕು ಎಂದು ಮಾನ್ಯ ಮುಜರಾಯಿ ಹಜ್, ವಕ್ಫ್ ಮತ್ತು ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀಮತಿ ಶಶಿಕಲಾ ಅ ಜೊಲ್ಲೆ ಹೇಳಿದರು.
ಮಾನವಿಯತೆಗಾಗಿ ಯೋಗ ಎಂಬ ಘೋಷವ್ಯಾಕ್ಯದಡಿ ಹಂಪಿಯ ಎದುರು ಬಸವಣ್ಣ ಮಂಟಪದ ಎದುರುಗಡೆ ಆಯೋಜಿಸಿದ್ದ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಇಂದು ಹಂಪಿಯಲ್ಲಿ ನಡೆದಂತಹ ಕಾರ್ಯಕ್ರಮ ವಿಶ್ವದ ಇತಿಹಾಸದಲ್ಲಿ ಹೊಸದೊಂದು ಮೈಲಿಗಲ್ಲನ್ನು ನೆಡುವಲ್ಲಿ ಯಶಸ್ವಿಯಾಗಿದೆ. ವಿಶ್ವದ ಇತಿಹಾಸಲ್ಲಿ ಪ್ರಮುಖವಾದ ಸ್ಥಾನವನ್ನು ವಿಜಯನಗರ ಸಂಸ್ಥಾನ ಪಡೆದುಕೊಂಡಿದೆ. ಈ ವಿಜಯನಗರ ಸಂಸ್ಥಾನದ ಪ್ರಮುಖ ತಾಣದಲ್ಲಿ ನಮ್ಮ ಸಂಸ್ಕೃತಿಯ ಭಾಗವಾಗಿರುವ ಯೋಗೋತ್ಸವ ಕಾರ್ಯಕ್ರಮವನ್ನು ಎಲ್ಲರೂ ಜೊತೆಗೂಡಿ ಅಚ್ಚುಕಟ್ಟಾಗಿ ನೆರವೇರಿಸಿದ್ದೇವೆ. ವಜ್ರ ವೈಢೂರ್ಯಗಳನ್ನು ಬೀದಿ ಬದಿಯಲ್ಲಿ ಮಾರಾಟ ಮಾಡುತ್ತಿದ್ದ ಸ್ಥಳದಲ್ಲಿ ನಡೆದಂತಹ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ನನ್ನ ಸೌಭಾಗ್ಯವೇ ಸರಿ ಎಂದು ಹರ್ಷ ವ್ಯಕ್ತಪಡಿಸಿದರು.
ಆಧುನಿಕ ಪ್ರಪಂಚದಲ್ಲಿ ಎಲ್ಲ ರೀತಿಯ ಅನುಕೂಲತೆಗಳಿದ್ದರೂ ಯಾರೊಬ್ಬರು ಅರೋಗ್ಯ, ಸಮಾಧಾನದಿಂದಿಲ್ಲ. ಉತ್ತಮ ಆರೋಗ್ಯ ಮತ್ತು ಮಾನಸಿಕ ಸಧೃಡತೆಯನ್ನು ಪಡೆಯುವಲ್ಲಿ ಯೋಗ ಪ್ರಮುಖ ಪಾತ್ರವಹಿಸುತ್ತದೆ. ಯೋಗಭ್ಯಾಸಕ್ಕೆ ಹೆಚ್ಚಿನ ಮಹತ್ವ ನೀಡದೇ ಇದ್ದಂತ ಸಂಧರ್ಭದಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವಸಂಸ್ಥೆ ಅಂತರಾಷ್ಟ್ರೀಯ ದಿನಾಚರಣೆಯನ್ನಾಗಿ ಘೋಷಿಸುವಂತೆ ಮಾಡುವ ಮೂಲಕ ಹೊಸ ಹುರುಪನ್ನು ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ಯೋಗವನ್ನು ಯೋಗ ದಿನಾಚರಣೆಯ ಒಂದು ದಿನಕ್ಕೆ ಸೀಮಿತಗೊಳಿಸದೇ ದಿನನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಸುಂದರ ಬದುಕಿಗೆ ಯೋಗ ಅತ್ಯುತ್ತಮ ಸಾಧನವಾಗಿದ್ದು, ಮಾನಸಿಕ ನೆಮ್ಮದಿಗೆ ಇದರ ಅಗತ್ಯವಿದೆ ಎಂದರು
ಶ್ವಾಸಗುರು ವಚನಾನಂದ ಸ್ವಾಮೀಜಿ ಅವರು ಕಳೆದ ಕೆಲ ವಾರಗಳಿಂದ ಹಂಪಿಯಲ್ಲಿ ಯೋಗೋತ್ಸವ ಹಾಗೂ ಯೋಗ ರಥಯಾತ್ರೆ ಮಾಡುವುದರ ಮೂಲಕ ಯೋಗದ ಮಹತ್ವ ಕುರಿತು ಜಾಗೃತಿ ಮೂಡಿಸುವ ಕೆಲಸ ಮಾಡಿದ್ದಾರೆ ಎಂದು ಸಚಿವರು ಶ್ಲಾಘಿಸಿದರು.
ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಶ್ವಾಸ ಯೋಗಪೀಠದ ಶ್ವಾಸಗುರು ಶ್ರೀ ವಚನಾನಂದ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ಕೇಂದ್ರ ಕಲ್ಲಿದ್ದಲು, ಗಣಿ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದಜೋಶಿ, ಪ್ರವಾಸೋದ್ಯಮ, ಪರಿಸರ, ಜೀವಿಶಾಸ್ತ್ರ ಸಚಿವರಾದ ಆನಂದಸಿಂಗ್, ಸಂಸದ ವೈ.ದೇವೇಂದ್ರಪ್ಪ ಸೇರಿದಂತೆ ಅನೇಕರು ಯೋಗಾಭ್ಯಾಸ ಮಾಡಿದರು. ಇವರೊಂದಿಗೆ ಸುಮಾರು 6 ಸಾವಿರಕ್ಕೂ ಹೆಚ್ಚು ಜನರು ಈ ಯೋಗದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯೋಗಾಭ್ಯಾಸ ಮಾಡಿದ್ದು ವಿಶೇಷವಾಗಿತ್ತು.
ಇದೇ ವೇಳೆ ಮೈಸೂರಿನಲ್ಲಿ ನಡೆದ ಪ್ರಧಾನಿಗಳ ಭಾಷಣದ ನೇರ ಪ್ರಸಾರವನ್ನು ನೆರೆದಿದ್ದವರು ವೀಕ್ಷಿಸಿದರು.
ಸಂಸದ ವೈ.ದೇವೇಂದ್ರಪ್ಪ, ಪದ್ಮಶ್ರೀ ಪುರಸ್ಕೃತೆ ಹಾಗೂ ಕರ್ನಾಟಕ ಜಾನಪದ ಅಕಾಡೆಮಿ ಅದ್ಯಕ್ಷೆ ಮಾತಾ ಮಂಜಮ್ಮ ಜೋಗತಿ, ಜಿಲ್ಲಾಧಿಕಾರಿ ಅನಿರುದ್ಧ್ ಪಿ.ಶ್ರವಣ್, ಜಿಪಂ ಸಿಇಒ ಹರ್ಷಲ್ ಬೋಯರ್ ನಾರಾಯಣ್‍ರಾವ್, ಎಸ್ಪಿ ಡಾ.ಕೆ.ಅರುಣ್, ಮಾತಂಗಬೆಟ್ಟದ ಸುವರ್ಣಾನಂದ ಸ್ವಾಮೀಜಿ, ಹಂಪಿ ಗ್ರಾ.ಪಂ. ಅಧ್ಯಕ್ಷೆ ಹಂಪಮ್ಮ, ಉಪಾಧ್ಯಕ್ಷೆ ಪದ್ಮಮ್ಮ, ಕನ್ನಡ ವಿವಿ ಕುಲಪತಿ ರಮೇಶ್, ಜಿಲ್ಲಾ ಆಯುಷ್ ಅಧಿಕಾರಿ ಡಾ.ಸುಜಾತಾ ಪಾಟೀಲ್ ಸೇರಿದಂತೆ ವಿಜಯನಗರ ಜಿಲ್ಲೆಯ ವಿವಿಧ ಯೋಗಸಂಸ್ಥೆಗಳು ಪ್ರತಿನಿಧಿಗಳು ಮತ್ತು ಅಧಿಕಾರಿಗಳು ಇದ್ದರು.
ಇದೇ ಸಂದರ್ಭದಲ್ಲಿ ಶ್ವಾಸಯೋಗ ಪೀಠದ ಶ್ವಾಸಗುರು ಶ್ರೀ ವಚನಾನಂದ ಸ್ವಾಮೀಜಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಜಿಲ್ಲಾ ಖನಿಜ ನಿಧಿ ಅನುದಾನದಡಿ ಹೊರಗುತ್ತಿಗೆ ಅಡಿ ನೇಮಿಸಿಕೊಳ್ಳಲಾದ ವೈದ್ಯರಿಗೆ ಆದೇಶ ಪತ್ರಗಳನ್ನು ಹಾಗೂ ಪ್ರವಾಸಿ ತರಬೇತಿ ಪಡೆದವರಿಗೆ ಪ್ರಮಾಣಪತ್ರಗಳನ್ನು ಇದೇ ಸಂದರ್ಭದಲ್ಲಿ ವಿತರಿಸಲಾಯಿತು.