ಕೇಂದ್ರೀಯ ವಿಹಾರ್ ಅಪಾರ್ಟ್‌ಮೆಂಟ್‌ನ 610 ನಿವಾಸಿಗಳನ್ನು ಸ್ಥಳಾಂತರ ಮಾಡುವ ಕೆಲಸ ಕ್ಷಿಪ್ರಗತಿಯಲ್ಲಿ ನಡೆಯುತ್ತಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾಲಿಕೆ ವ್ಯಾಪ್ತಿಯ ಯಲಹಂಕದಲ್ಲಿ ಇದೆಂದೂ ಕೇಳರಿಯದಂತಹ ಪ್ರಮಾಣದಲ್ಲಿ ಮಳೆಯಾಗಿದೆ ಎಂದು ಹೇಳಿದ್ದಾರೆ.
ಈ ಭಾಗದಲ್ಲಿ ಎರಡು-ಮೂರು ಗಂಟೆಗಳಲ್ಲಿ ಹೆಚ್ಚು ಮಳೆಯಾಗಿದೆ. ಹಲವಾರು ಕೆರೆಯ ನೀರು ಯಲಹಂಕಕ್ಕೆ ಹರಿದು ಬಂದಿದ್ದು ಕೆರೆ ಕೋಡಿ ಬಿದ್ದಿದೆ. ಅಲ್ಲದೆ, ತಗ್ಗು ಪ್ರದೇಶಗಳಿಗೆ ಮಳೆ ನೀರು ನುಗ್ಗಿದೆ. ಪರಿಣಾಮ ಕೇಂದ್ರೀಯ ವಿಹಾರ್ ಅಪಾರ್ಟ್‌ಮೆಂಟ್‌ಗೆ ನೀರು ನುಗ್ಗಿ, ಅವಾಂತರ ಸೃಷ್ಟಿಯಾಗಿದೆ ಎಂದು ತಿಳಿಸಿದ್ದಾರೆ.
ಅಪಾರ್ಟ್ಮೆಂಟ್ ನಲ್ಲಿ ವಾಸಿಸುತ್ತಿದ್ದ 610 ನಿವಾಸಿಗಳನ್ನು ಸ್ಥಳಾಂತರ ಮಾಡುವ ಕೆಲಸ ಕ್ಷಿಪ್ರಗತಿಯಲ್ಲಿ ನಡೆಯುತ್ತಿದೆ. ಅವರೆಲ್ಲರಿಗೂ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಹೇಳಿದ್ದಾರೆ.
ಇಂದು ಸಂಜೆಯೊಳಗೆ ನೀರು ಹೊರಹಾಕುವ ಕೆಲಸ ಆಗಲಿದ್ದು, ಯಲಹಂಕದಿಂದ ಜಕ್ಕೂರು ಕೆರೆಗೆ ಮಳೆ ನೀರು ಸರಾಗವಾಗಿ ಹರಿದು ಹೋಗಲು ವ್ಯವಸ್ಥೆ ಮಾಡಲಾಗುತ್ತೆ ಎಂದು ಮಾಹಿತಿ ನೀಡಿದ್ದಾರೆ.