ಮೈಸೂರು: ವಿಶ್ವವಿಖ್ಯಾತ ದಸರಾ ಮಹೋತ್ಸವಕ್ಕೆ ಭರ್ಜರಿ ತಯಾರಿ ನಡೆದಿದೆ. ಇದರ ಮಧ್ಯೆಯೇ ಅಂಬಾರಿ ಹೊರಲಿರುವ ಅರ್ಜುನನಿಗೆ ಇಂದಿನಿಂದ ಮರದ ಅಂಬಾರಿ ಹೊರುವ ತಾಲೀಮು ಶುರುವಾಗಿದೆ.
ಮರಳು ಮೂಟೆ ಹೊರುವ ತಾಲೀಮಿನ ಬಳಿಕ ಗಜಪಡೆಗೆ 750ಕೆಜಿ ತೂಕದ ಮರದ ಅಂಬಾರಿ ಹೊರುವ ತಾಲೀಮು ಆರಂಭಿಸಲಾಗಿದೆ. ಮೈಸೂರು ಅರಮನೆ ಆವರಣದಲ್ಲಿ ಡಿಸಿಎಫ್ ಏಡುಕುಂಡಲ ಮತ್ತು ಆನೆ ವೈದ್ಯ ಡಾ.ನಾಗರಾಜ್ ಮರದ ಅಂಬಾರಿಗೆ ಪೂಜೆ ಸಲ್ಲಿಸಿದರು. ಬಳಿಕ ಗಜಪಡೆ ಕ್ಯಾಪ್ಟನ್ ಅರ್ಜುನನ ಬೆನ್ನಿಗೆ ಅರಣ್ಯ ಇಲಾಖೆ ಸಿಬ್ಬಂದಿ ಮರದ ಅಂಬಾರಿ ಕಟ್ಟಿದರು. ನಂತರ ಕ್ಯಾಪ್ಟನ್ ಅರ್ಜುನ ಮರದ ಅಂಬಾರಿ ಹೊತ್ತು ತಾಲೀಮು ಆರಂಭಿಸಿದ್ದಾನೆ.
ಅರ್ಜುನನಿಗೆ ಕುಮ್ಕಿ ಆನೆಗಳಾದ ವಿಜಯ, ವರಲಕ್ಷ್ಮಿ ಸಾಥ್ ನೀಡಿವೆ. ಅಭಿಮನ್ಯು, ಬಲರಾಮ, ಗಜೇಂದ್ರ, ಭೀಮ, ದ್ರೋಣ, ಗೋಪಾಲಸ್ವಾಮಿ, ವಿಕ್ರಮ ಆನೆಗಳು ಸಹ ತಾಲೀಮಿನಲ್ಲಿ ಭಾಗಿಯಾಗಿವೆ. ಅರಮನೆ ಆವರಣದಿಂದ ಸಾಗಿರುವ ಆನೆಗಳು ಕೋಟೆ ಆಂಜನೇಯಸ್ವಾಮಿ ದೇವಸ್ಥಾನ, ಕೆ.ಆರ್.ಸರ್ಕಲ್, ಸಯ್ಯಾಜಿ ರಾವ್ ರಸ್ತೆ, ತಿಲಕ್ ನಗರ, ಬಂಬೂಬಜಾರ್, ಬನ್ನಿಮಂಟಪ ಮೂಲಕ ಸಾಗಿ ಪಂಜಿನ ಕವಾಯಿತು ಮೈದಾನ ತಲುಪಲಿವೆ.