ಹಳೇ ನಾಣ್ಯಗಳ ಮಾರಾಟಕ್ಕೆ ಮುಂದಾದ ಮಹಿಳೆಗೆ ಗ್ರಾಹಕನ ಸೋಗಿನಲ್ಲಿ ವಂಚಿಸಿದ ಸೈಬರ್ ವಂಚಕ 1.04 ಲಕ್ಷ ರೂ. ವಂಚನೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ಶೇಷಾದ್ರಿಪುರಂ 44 ವರ್ಷದ
ಮಹಿಳೆ ವಂಚನೆಗೆ ಒಳಗಾದವರು. ಹಳೆಯ ನಾಣ್ಯಗಳನ್ನು ಸಂಗ್ರಹಿಸಿದ್ದ ಮಹಿಳೆ, ಅವುಗಳನ್ನು ಆನ್‍ಲೈನ್‍ನಲ್ಲಿ ಮಾರಾಟ ಮಾಡುವ ಉದ್ದೇಶಕ್ಕಾಗಿ ವೆಬ್‍ಸೈಟ್ ಲಿಂಕ್ ಹುಡುಕುತ್ತಿದ್ದರು. ಈ ವೇಳೆ ಗೂಗಲ್‍ನಲ್ಲಿ ಇಂಡಿಯನ್ ಕಾಯಿನ್ ಡಾಟ್ ಕಾಂ. ವೆಬ್‍ಸೈಟ್ ವಿಳಾಸ ಸಿಕ್ಕಿದ್ದು, ಅದರಲ್ಲಿ ನಾಣ್ಯಗಳ ಫೋಟೋಗಳನ್ನು ಅಪ್‍ಲೋಡ್ ಮಾಡಿ ಮೊಬೈಲ್ ನಂಬರ್ ಉಲ್ಲೇಖಿಸಿದ್ದರು.
ಕೆಲವೇ ಹೊತ್ತಿನಲ್ಲಿ ಮಹಿಳೆಗೆ ಕರೆ ಮಾಡಿದ ಅಪರಿಚಿತ ವ್ಯಕ್ತಿ, `ನಿಮ್ಮ ಬಳಿ ಇರುವ ಹಳೇ ನಾಣ್ಯಗಳನ್ನು ಖರೀದಿ ಮಾಡುತ್ತೇನೆ. ಅದಕ್ಕೂ ಮೊದಲು ನೋಂದಣಿ ಶುಲ್ಕ ಪಾವತಿ ಮಾಡಬೇಕು,' ಎಂದು ಷರತ್ತು ವಿಧಿಸಿದ್ದಾರೆ.
ಇದನ್ನು ನಂಬಿದ ಮಹಿಳೆ, ಅಪರಿಚಿತ ವ್ಯಕ್ತಿ ಕೊಟ್ಟ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡಿದ್ದಾರೆ. ಇದೇ ರೀತಿ ಹಂತ- ಹಂತವಾಗಿ ಸಬೂಬು ಹೇಳಿ 1.04 ಲಕ್ಷ ರೂ.ಗಳನ್ನು ಆನ್‍ಲೈನ್‍ನಲ್ಲಿ ವರ್ಗಾವಣೆ ಮಾಡಿಸಿಕೊಂಡಿದ್ದಾರೆ.
ನಾಣ್ಯಗಳನ್ನು ಮಾತ್ರ ಖರೀದಿ ಮಾಡಿ ಹಣ ಕೊಡಲಿಲ್ಲ. ಕೊನೆಗೆ ಅನುಮಾನ ಬಂದು ಮಹಿಳೆ, ತಾನು ಪಾವತಿ ಮಾಡಿದ್ದ ಹಣವನ್ನು ವಾಪಸ್ ಕೊಡುವಂತೆ ಕೇಳಿದಾಗ ಅಪರಿಚಿತ ವ್ಯಕ್ತಿ ಸಂಪರ್ಕ ಕಡಿತ ಮಾಡಿಕೊಂಡಿದ್ದಾನೆ. ನೊಂದ ಮಹಿಳೆ, ವಂಚನೆಗೆ ಒಳಗಾಗಿರುವುದು ಗೊತ್ತಾಗಿ ಕೇಂದ್ರ ವಿಭಾಗದ ಸಿಇಎನ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೆÇಲೀಸರು ತನಿಖೆ ಕೈಗೊಂಡಿದ್ದಾರೆ.