ಬೆಂಗಳೂರು : ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮತ್ತೆ ಕೊರೊನಾ ರಣಕೇಕೆ ಆರಂಭವಾಗಿದ್ದು, 16 ದಿನಗಳ ಬಳಿಕ ಮತ್ತೆ ಕೊರೊನಾಗೆ ಮಹಿಳೆಯೊಬ್ಬರು ಬಲಿಯಾಗಿದ್ದಾರೆ.
ಬೆಂಗಳೂರಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆ ಆಗುತ್ತಲೇ ಇದೆ. ಆದರೆ ಸಾವಿನ ಸಂಖ್ಯೆ ಶೂನ್ಯ ಪ್ರಮಾಣದಲ್ಲಿತ್ತು. ಆದರೆ ಈಗ ಮತ್ತೆ ಬೆಂಗಳೂರಿನಲ್ಲಿ ಕೊರೊನಾ ಸೋಂಕಿಗೆ 72 ವರ್ಷದ ಮಹಿಳೆ ಬಲಿಯಾಗಿದ್ದಾರೆ.
ಬೆಂಗಳೂರಿನ ನಿವಾಸಿಯಾಗಿರುವ ಇವರು ಕೆಲ ದಿನಗಳಿಂದ ಜ್ವರ ಮತ್ತು ಕೆಮ್ಮು ಹಾಗೂ ಉಸಿರಾಟದ ಸಮಸ್ಯೆಯಿಂದ ಬಳಲುತ್ತಾ ಇದ್ದರು. ಈ ಹಿನ್ನೆಲೆಯಲ್ಲಿ 72 ವರ್ಷದ ಮಹಿಳೆ ಖಾಸಗಿ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.
ಈಗಾಗಲೇ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೊವಿಡ್ ಸೋಂಕಿತರ ಸಂಖ್ಯೆ 300ರ ಸನಿಹಕ್ಕೆ ಬಂದಿದೆ. 300ರ ಸನಿಹಕ್ಕೆ ಬಂದರೂ ಈವರೆಗೂ ಒಂದು ಸಾವು ಕೂಡ ಆಗಿರಲಿಲ್ಲ. ಆದರೆ ದೇಶಾದ್ಯಂತ ಕೇಸ್ ಹೆಚ್ಚಳ ಆಗುತ್ತಿರುವ ಬೆನ್ನಲ್ಲೆ ಬೆಂಗಳೂರಿನಲ್ಲಿ ಕೊರೊನಾಗೆ ಬಲಿಯಾಗಿರುವುದು ಜನರಲ್ಲಿ ಆತಂಕ ಮೂಡಿಸಿದೆ.
ಜೂನ್ 1 ರಿಂದ 5ರವರೆಗೆ ಬೆಂಗಳೂರಿನಲ್ಲಿ ಕೇಸ್ ಏರಿಕೆ ಈ ರೀತಿ ಇದೆ. ಜೂನ್ 1ರಂದು ಕೊರೊನಾ ಸೋಂಕಿತರ ಸಂಖ್ಯೆ 158 ಕೇಸ್ ಹಾಗೂ ಶೂನ್ಯ ಸಾವಾಗಿತ್ತು. ಜೂ. 2ರಂದು 276 ಕೇಸ್‍ಗೆ ಏರಿಕೆ ಆಗಿದ್ದರೂ ಸಾವಾಗಿರಲಿಲ್ಲ. ಜೂ. 3ರಂದು 243 ಕೇಸ್ ಹಾಗೂ ಜೂ. 4 ರಂದು 210 ಕೇಸ್ ಇದ್ದರೂ, ಒಂದು ಸಾವಾಗಿರಲಿಲ್ಲ. ಆದರೆ ಜೂ. 5 ರಂದು 291 ಕೇಸ್ ದಾಖಲಾಗಿದ್ದು, ಇದರ ಜೊತೆಗೆ ಒಬ್ಬರು ಬಲಿಯಾಗಿದ್ದಾರೆ.