ಬೆಳಗಾವಿ: ವ್ಹಾ.... ರೇ... ವ್ಹಾ.....! ಏನ್ ಗುರು... ಇಷ್ಟೊಂದು ವೆರೈಟಿ ವೈನ್ ಗಳು! ಮೂವತ್ತು ವರ್ಷಗಳಿಂದ ವೈನ್ ಕುಡಿತಾ ಇದ್ರೂ, ಷ್ಟೊಂದು ಬಗೆಯ ವೈನ್ ನೋಡಿರ್ಲಿಲ್ವಲ್ಲ...!
ಇಂಥಹ ಉದ್ಗಾರ, ಆಶ್ಚರ್ಯ, ಆಸಕ್ತಿದಾಯಕ ಮಾತುಗಳು ಕುಂದಾನಗರಿ ಬೆಳಗಾವಿಯಲ್ಲಿ ನಿನ್ನೆ ಸಾಯಂಕಾಲದಿಂದ ಕೇಳಿ ಬರುತ್ತಿದೆ. ಕಾರಣವಿಷ್ಟೇ, ನಗರದ ಮಲೇನಿಯಂ ಗಾರ್ಡನ್ ದಲ್ಲಿ ವೈನ್ ಉತ್ಸವ ಆರಂಭವಾಗಿದ್ದು, ಒಪ್ಪ ಓರಣವಾಗಿ ಜೋಡಿಸಿಟ್ಟ ಬಗಬಗೆಯ ವೈನ್ ಬಾಟಲ್ ಗಳನ್ನು ನೋಡಿ ವೈನ್ ಪ್ರಿಯರು ಆಶ್ಚರ್ಯ ಚಕಿತರಾಗುತ್ತಿದ್ದಾರೆ. ತೋಟಗಾರಿಕಾ ಇಲಾಖೆ, ಜಿಲ್ಲಾಡಳಿತ ಮತ್ತು ದ್ರಾಕ್ಷಾರಸ ಮಂಡಳಿ ವತಿಯಿಂದ 'ಬೆಳಗಾವಿ ದ್ರಾಕ್ಷಾರಸ ಉತ್ಸವ' ಆರಂಭವಾಗಿದ್ದು, ಭಾನುವಾರದವರೆಗೂ ನಡೆಯಲಿದೆ.
ಆರೋಗ್ಯಕರ ಪೇಯ ವೈನ್ ಬಳಕೆ ಉತ್ತೇಜಿಸುವ ದೃಷ್ಟಿಯಿಂದ, ವೈನ್ ದ್ರಾಕ್ಷಿ ಬೆಳೆಗಾರರ ಅಭಿವೃದ್ಧಿ ಗಾಗಿ ಮತ್ತು ಸಾರ್ವಜನಿಕರಿಗೆ ಉದ್ಯಮದ ಬಗ್ಗೆ ತಿಳಿವಳಿಕೆ ನೀಡಲು ನಗರದಲ್ಲಿ ಸತತ ಮೂರನೇ ಬಾರಿ ಈ ಉತ್ಸವ ಆಯೋಜನೆ ಮಾಡಲಾಗಿದೆ. ಎಲ್ಲ ವೈನ್ ಬ್ರಾಂಡ್ ಗಳ ಮೇಲೆ ಗ್ರಾಹಕರಿಗೆ ಶೇ. 10 ರಷ್ಟು ರಿಯಾಯಿತಿ ನೀಡಲಾಗುತ್ತಿದೆ. 150 ಕ್ಕೂ ಹೆಚ್ಚು ವೈವಿಧ್ಯಮಯ ಬ್ರಾಂಡ್ ಗಳು ಪ್ರದರ್ಶನವಾಗುತ್ತಿವೆ. 10ಕ್ಕೂ ಹೆಚ್ಚು ಪ್ರಸಿದ್ಧ ವೈನ್ ಕಂಪನಿಗಳು ಈ ಮೇಳದಲ್ಲಿ ಭಾಗವಹಿಸಿದ್ದು ಮೇಳದ ವಿಶೇಷವಾಗಿದೆ.
ನಿನ್ನೆ ತಡ ರಾತ್ರಿ 11ರವರೆಗೂ ಮೇಳ ನಡೆದಿದ್ದು, ಇಂದು ಮುಂಜಾನೆ ಒಂಬತ್ತಕ್ಕೇ ನಗರದ ವಿವಿಧ ಭಾಗಗಳಿಂದ ವೈನ್ ಪ್ರಿಯರು ಮಲೇನಿಯ್ಂ ಗಾರ್ಡನ್ ಗೆ ಲಗ್ಗೆ ಇಡುತ್ತಿದ್ದಾರೆ. ಯುವ ಸಮುದಾಯವಂತೂ ತಂಡೋಪ ತಂಡವಾಗಿ ಅಪರೂಪದ ವೈನ್ ರುಚಿಯನ್ನು ಸವಿಯಲು ಮುಗಿಬಿದ್ದಿದೆ. ಅವರ ಜತೆ ಮಹಿಳೆಯರು ಸಹ ತಾವೇನೂ ಕಡಿಮೆಯಿಲ್ಲ ಎಂದು ಯುವಕರಿಗೆ ಪೈಪೋಟಿ ನೀಡುತ್ತಿದ್ದಾರೆ. ಇಂದು ಸಂಜೆ 6.30ಕ್ಕೆ ಗೋವಾದ ಬ್ರದರ್ ಇನ್ ಆರ್ಮ್ಸ್ ಅವರಿಂದ ಸಾರ್ವಜನಿಕರಿಗೆ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.