ಹುಬ್ಬಳ್ಳಿ :ಶನಿವಾರ ಪ್ರಾರಂಭಗೊಂಡ ಪಕ್ಷದ ಕಾರ್ಯಾಲಯ ಉದ್ಘಾಟನೆ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಪಾಲ್ಗೊಂಡಿದ್ದು, ಜಗದೀಶ್ ಶೆಟ್ಟರ್ ಕಾರ್ಯಕ್ರಮದಿಂದ ದೂರವುಳಿದಿದ್ದಾರೆ. ಅವರಿಗೆ ಬೆಂಗಳೂರಿನಲ್ಲಿ ಮಹತ್ವದ ಕೆಲಸವಿದ್ದ ಕಾರಣ ಕಾರ್ಯಕ್ರಮಕ್ಕೆ ಬಂದಿಲ್ಲಎಂದು ಪ್ರಲ್ಹಾದ್ ಜೋಶಿ ಸಬೂಬು ಹೇಳಿದ್ದರೂ ಸಹ ಕಾರ್ಯಕರ್ತರ ನಡುವೆ ಈ ಬಗ್ಗೆ ಸಂಶಯ ವ್ಯಕ್ತವಾಗಿದೆ.
ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಸಿಗದ ಕಾರಣಕ್ಕೆ ಮುನಿಸಿಕೊಂಡು ಕಾಂಗ್ರೆಸ್ ಸೇರಿದ್ದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಬಳಿಕ ಮತ್ತೆ ಬಿಜೆಪಿ ಸೇರಿದ್ದು, ಈಗ ಬಿಜೆಪಿಯಲ್ಲಿಯೂ ಇರಿಸುಮುರುಸು ಅನುಭವಿಸುತ್ತಿದ್ದಾರೆಯೇ ಎಂಬ ಪ್ರಶ್ನೆ ಉದ್ಭವವಾಗಿದೆ. ಬಿಜೆಪಿ ಮತ್ತು ಸಂಸದ ಪ್ರಲ್ಹಾದ್ ಜೋಶಿ ಜೊತೆಗಿನ ವೇದಿಕೆ ಕಾರ್ಯಕ್ರಮಗಳಲ್ಲಿ ಜಗದೀಶ್ ಶೆಟ್ಟರ್ ಕಾಣಿಸಿಕೊಳ್ಳದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಹುಬ್ಬಳ್ಳಿಯ ವಾಜಪೇಯಿ ಮತ್ತು ಅಡ್ವಾಣಿ ಜೋಡಿ ಎಂದೇ ಹೆಸರಾಗಿದ್ದ ಜಗದೀಶ್ ಶೆಟ್ಟರ್ ಮತ್ತು ಪ್ರಲ್ಹಾದ್ ಜೋಶಿ ಈ ಹಿಂದೆ ಅತ್ಯಾಪ್ತರಾಗಿದ್ದರು. ಆದರೆ ಜಗದೀಶ್ ಶೆಟ್ಟರ್ ಕಾಂಗ್ರೆಸ್ ಸೇರ್ಪಡೆಯಾದ ಮೇಲೆ ಇಬ್ಬರೂ ಪರಸ್ಪರರ ವಿರುದ್ದ ದೋಷಾರೋಪಣೆಯಲ್ಲಿ ತೊಡಗಿದ್ದರು. ಜಗದೀಶ್ ಶೆಟ್ಟರ್ ಬಿಜೆಪಿಗೆ ವಾಪಸಾದ ಸಂದರ್ಭದಲ್ಲೂ ಸಹ ಪ್ರಲ್ಹಾದ್ ಜೋಶಿ ಪಕ್ಷ ಸೇರ್ಪಡೆ ಕಾರ್ಯಕ್ರಮದಿಂದ ದೂರವುಳಿದಿದ್ದು ಗಮನಾರ್ಹ. ಲೋಕಸಭಾ ಚುನಾವಣೆ ಮುಂದಿರುವ ಸಮಯದಲ್ಲೇ ಇವರಿಬ್ಬರ ನಡುವಿನ ಮುನಿಸು ಕಾರ್ಯಕರ್ತರ ಆತಂಕಕ್ಕೆ ಕಾರಣವಾಗಿದೆ.