ಬೆಂಗಳೂರು: ಬಿಜೆಪಿಯ ಭೀಷ್ಮ, ಹಿರಿಯ ನಾಯಕ ಎಲ್.ಕೆ. ಅಡ್ವಾಣಿಯವರಿಗೆ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿ ಭಾರತ ರತ್ನ ನೀಡಿ ಗೌರವಿಸಲಾಗಿದೆ.
ಮೋದಿ ಸರ್ಕಾರದ ಈ ನಿರ್ಧಾರದ ಬಗ್ಗೆ ರಾಜ್ಯ ಕಾಂಗ್ರೆಸ್ ನಾಯಕರು ಪ್ರತಿಕ್ರಿಯಿಸಿದ್ದಾರೆ. ಬಿಜೆಪಿ ಹಿರಿಯ ನಾಯಕನಿಗೆ ಭಾರತ ರತ್ನ ಕೊಟ್ಟಿದ್ದಕ್ಕೆ ನಮ್ಮ ವಿರೋಧವಿಲ್ಲ. ಆದರೆ ನಮ್ಮ ತ್ರಿವಧಿ ದಾಸೋಹಿ ಡಾ. ಶಿವಕುಮಾರ ಸ್ವಾಮೀಜಿಯವರಿಗೆ ಭಾರತ ರತ್ನ ನೀಡಬೇಕೆಂದು ಎಷ್ಟೋ ಬಾರಿ ಮನವಿ ಮಾಡಿದ್ದೇವೆ. ಆದರೆ ಅವರಿಗೆ ಯಾಕೆ ಇನ್ನೂ ನೀಡಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಆಕ್ಷೇಪಿಸಿದ್ದಾರೆ.
ಅಡ್ವಾಣಿಗೆ ಭಾರತ ರತ್ನ ನೀಡದ ಬೆನ್ನಲ್ಲೇ ಕೇಳಿಬಂತು ಅಪಸ್ವರ
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ತನ್ನ ಹಿರಿಯ ನಾಯಕನಿಗೆ ಅತ್ಯುನ್ನತ ಗೌರವ ನೀಡಿದೆ. ಇದಕ್ಕೆ ಯಾರದ್ದೂ ಆಕ್ಷೇಪವಿಲ್ಲ. ಯಾಕೆಂದರೆ ಅಡ್ವಾಣಿ ರಾಜಕೀಯದ ಮುತ್ಸುದ್ದಿ. ಸಾಕಷ್ಡು ಹೋರಾಟಗಳಲ್ಲಿ ಭಾಗಿಯಾದವರು. ಎಲ್ಲಾ ಪಕ್ಷದವರ ಗೌರವ ಸಂಪಾದಿಸಿದವರು. ಆದರೆ ಸಿದ್ದಗಂಗಾ ಮಠಾಧೀಶ ಡಾ. ಶಿವಕುಮಾರ ಸ್ವಾಮೀಜಿಯವರು ಅನೇಕ ಸಮಾಜಮುಖೀ ಕಾರ್ಯಗಳನ್ನು ಮಾಡಿ ಭಕ್ತವೃಂದದವರ ಪಾಲಿಗೆ ನಡೆದಾಡುವ ದೇವರು ಎಂದು ಕರೆಯಿಸಿಕೊಂಡವರು. ಅವರ ಸಮಾಜಮುಖೀ ಕೆಲಸಗಳನ್ನು ಪರಿಗಣಿಸಿ ಭಾರತ ರತ್ನ ನೀಡಬೇಕಿತ್ತು ಎನ್ನುವುದು ಕಾಂಗ್ರೆಸ್ ನಾಯಕರ ವಾದ.
ಅಡ್ವಾಣಿಯವರಿಗೆ ಭಾರತ ರತ್ನ ನೀಡಲಿ. ಅದಕ್ಕೆ ನಮ್ಮ ವಿರೋಧವಿಲ್ಲ. ಆದರೆ ಶಿವಕುಮಾರಸ್ವಾಮೀಜಿಗಳಿಗೆ ಭಾರತ ರತ್ನ ನೀಡಬೇಕೆಂದು ಪತ್ರ ಬರೆದಿದ್ದೆವು. ಆದರೆ ಅವರಿಗೆ ಕೊಟ್ಟಿಲ್ಲ ಎಂದು ಸಿದ್ದರಾಮಯ್ಯ ಆಕ್ಷೇಪಿಸಿದ್ದಾರೆ. ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಕೂಡಾ ಇದೇ ಮಾತನ್ನಾಡಿದ್ದಾರೆ.