ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸ್ಪಂದಿಸಿದ ಹಾಗೇ ರಾಜ್ಯ ಸರಕಾರ ಮಹದಾಯಿ ವಿವಾದಕ್ಕೂ ಸ್ಪಂದಿಸಬೇಕು ಎಂದು ಜೆಡಿಎಸ್ ಶಾಸಕ ಎನ್.ಎಚ್.ಕೋನರೆಡ್ಡಿ ಹಾಗೂ ಲೋಕನಾಥ್ ಹೆಬಸೂರು ಜಂಟಿ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿಕೊಂಡರು.
ಕಳಸಾ ಬಂಡೂರಿ ಹಾಗೂ ಮಹದಾಯಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಇಂದು ಹುಬ್ಬಳ್ಳಿಯಲ್ಲಿ ಸಭೆ ಕರೆಯಲಾಗಿತ್ತು.
ಸಭೆಯ ಬಳಿಕ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಹದಾಯಿ ನದಿ ನೀರು ಹಂಚಿಕೆ ವಿವಾದವನ್ನು ಸರಕಾರ ಗಂಭೀರವಾಗಿ ಪರಿಗಣಿಸಬೇಕು. ಕಾವೇರಿ ವಿವಾದಕ್ಕೆ ಸ್ಪಂದಿಸಿದ ಹಾಗೇ ಮಹದಾಯಿ ವಿವಾದಕ್ಕೂ ಸ್ಪಂದಿಸಬೇಕು, ಪ್ರಧಾನಿ ಮೋದಿ ಮಧ್ಯಸ್ಥಿಕೆ ವಹಿಸಿ ವಿವಾದವನ್ನು ಇತ್ಯರ್ಥಗೊಳಿಸಬೇಕು ಎಂದು ಆಗ್ರಹಿಸಿದರು.
ಕಾವೇರಿ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಹೇಗೆ ವಿಶೇಷ ವಿಧಾನ ಮಂಡಲ ಅಧಿವೇಶನ ಕರೆಯಲಾಗಿತ್ತೋ ಹಾಗೇ ಮಹದಾಯಿ ವಿಚಾರದಲ್ಲೂ ವಿಶೇಷ ಅಧಿವೇಶನ ಕರೆದು ಚರ್ಚಿಸಲಿ. ಹಾಗೂ ಮಹದಾಯಿ ಹೋರಾಚಗಾರರ ಮೇಲಿನ ಪ್ರಕರಣಗಳನ್ನು ಹಿಂಪಡೆಯಲಿ ಒತ್ತಾಯಿಸಿದರು.
ಮಹದಾಯಿ ವಿಚಾರವಾಗಿ ಅಕ್ಟೋಬರ್ 21 ರಂದು ಮೂರು ರಾಜ್ಯದ ಮುಖ್ಯಮಂತ್ರಿಗಳ ಸಭೆ ಕರೆದಿರುವುದು ಸ್ವಾಗತಾರ್ಹ ಎಂದು ಜೆಡಿಎಸ್ ಶಾಸಕ ಎನ್.ಎಚ್.ಕೋನರೆಡ್ಡಿ ಹಾಗೂ ಲೋಕನಾಥ್ ಹೆಬಸೂರು ತಿಳಿಸಿದರು.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ