ಧಾರವಾಡ: ಮಹದಾಯಿ ಸಮಸ್ಯೆ ಕುರಿತು ಮುಂದೂಡಲ್ಪಟ್ಟ ಮೂರು ರಾಜ್ಯಗಳ ಮುಖ್ಯಮಂತ್ರಿ ಸಭೆ ನವೆಂಬರ್‌ನಲ್ಲಿ ನಡೆಯಲಿದೆ ಎಂದು ಮಾಜಿ ಮುಖ್ಯಮಂತ್ರಿ ಹೇಳಿದ್ದು ರೈತರನ್ನು ಯಾಮಾರಿಸಲು ಹೇಳಿರುವ ನಾಟಕದ ಮಾತು ಎಂದು ನವಲಗುಂದ ಶಾಸಕ ಎನ್.ಎಚ್. ಕೋನರೆಡ್ಡಿ ಆರೋಪಿಸಿದ್ದಾರೆ.
ನಗರದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅಕ್ಟೋಬರ್ 21ರಂದು ನಡೆಯಬೇಕಿದ್ದ ಮೂರು ರಾಜ್ಯಗಳ ಮುಖ್ಯಮಂತ್ರಿ ಸಭೆಯನ್ನು ಗೋವಾ ಮುಖ್ಯಮಂತ್ರಿ ತಾಂತ್ರಿಕ ಕಾರಣ ಹೇಳಿ ಮುಂದೂಡಿದ್ದರು. ಸಂದರ್ಭದಲ್ಲಿ ಅವರ ಪರವಾಗಿ ಬ್ಯಾಟ್ ಬೀಸಿದ್ದ ಜಗದೀಶ ಶೆಟ್ಟರ್ ನವೆಂಬರ್ ಮೊದಲ ವಾರದಲ್ಲಿ ಸಭೆ ನಡೆಯಲಿದೆ ಎಂದಿದ್ದರು. ಈಗ ವಾರ ಕಳೆದು ಅಧಿವೇಶನದ ದಿನ ಸಮೀಪಿಸುತ್ತಿದೆ. ಮುಂದೂಡಲ್ಪಟ್ಟ ಸಭೆಯ ಮಾತು ಯಾರ ಬಾಯಿಂದಲೂ ಬರುತ್ತಿಲ್ಲ. ಇದೆಲ್ಲ ಶೆಟ್ಟರ್ ಅವರು ಅಂದಿನ ಸಂದರ್ಭದಲ್ಲಿ ರೈತರನ್ನು ಯಾಮಾರಿಸಲು ಹೇಳಿದ್ದ ಮಾತು ಎಂದಿದ್ದಾರೆ.
ಆ ವೇಳೆ ಶೆಟ್ಟರ್ ಸುಳ್ಳು ಹೇಳಿದ್ದು ಯಾಕೆ? ಜವಾಬ್ದಾರಿ ಸ್ಥಾನದಲ್ಲಿರುವ ವ್ಯಕ್ತಿಯೊಬ್ಬರು ಸಮೂಹಕ್ಕೆ ಹೀಗೆ ಸುಳ್ಳು ಹೇಳುವುದು ಸರಿಯೇ? ಇಷ್ಟು ವರ್ಷಗಳ ಕಾಲ ಮಹದಾಯಿ ವಿಷಯ ಹೇಳುತ್ತಲೇ ಚುನಾಯಿತರಾಗುತ್ತಿರುವ ಬಿಜೆಪಿ ಕೆಲವು ಮುಖಂಡರು, ಮಹದಾಯಿ ವಿಷಯ ಕುರಿತು ಇನ್ನಾದರೂ ತಮ್ಮ ನಿಲುವೇನೆಂಬುದನ್ನು ಸ್ಪಷ್ಟಪಡಿಸಲಿ. ಇದೇ ನ. 21ರಿಂದ ಬೆಳಗಾವಿಯಲ್ಲಿ ಚಳಿಗಾಲ ಅಧೀವೇಶನ ನಡೆಯಲಿದೆ. ಅದರೊಳಗೆ ಉತ್ತರ ಕರ್ನಾಟಕ ಭಾಗದ ಶಾಸಕರ ಸಭೆ ಕರೆದು ಮಹದಾಯಿ ಕುರಿತು ಸ್ಪಷ್ಟ ನಿರ್ಧಾರ ತೆಗೆದುಕೊಂಡು ಅಧೀವೇಶನದಲ್ಲಿ ಪ್ರಸ್ತಾಪಿಸಲಾಗುವುದು ಎಂದರು.
ರಾಜ್ಯದಲ್ಲಿಯೇ ಅತಿ ಹೆಚ್ಚು ಬರಕ್ಕೆ ತುತ್ತಾದ ಜಿಲ್ಲೆ ಧಾರವಾಡ. ಆದರೆ ಕೇಂದ್ರ ಬರ ಅಧ್ಯಯನ ತಂಡದ ಪ್ರವಾಸ ಇಲ್ಲಿಗೆ ಬರುವುದು ರದ್ದಾಗಿದೆ. ಪರಿಸ್ಥಿತಿ ಏಣೆಂದು ತಿಳಿಯದೆ ಪರಿಹಾರ ಹೇಗೆ ಘೋಷಿಸಲು ಸಾಧ್ಯ. ಈ ಹಿನ್ನೆಲೆಯಲ್ಲಿ ಬರ ಅಧ್ಯಯನ ತಂಡ ಇಲ್ಲಿಗೂ ಭೇಟಿ ನೀಡಬೇಕು. ರೈತರ ಭೂಮಿ, ಬೆಳೆದ ಬೆಳೆ ಹಾಗೂ ಅವರ ಪರಿಸ್ಥಿತಿಯನ್ನು ಕಣ್ಣಾರೆ ಕಾಣಬೇಕು ಎಂದು ಒತ್ತಾಯಿಸಿದ ಕೋನರಡ್ಡಿ, ಕೇಂದ್ರ ಹಾಗೂ ರಾಜ್ಯ ಸರಕಾರಗಳು ರೈತರೊಂದಿಗೆ ಚಲ್ಲಾಟವಾಡುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ