ಹೆಣ್ಣು ಆನೆ ಮರಿ 'ಶೃತಿ'ಗೆ ಮಾವುತರ ಮಕ್ಕಳು ಈ ಕೆಲಸ ಮಾಡಿದ್ದಾರೆ.
ಅಂತರಾಷ್ಟ್ರೀಯ ಆನೆಗಳ ದಿನದ ಅಂಗವಾಗಿ ಆನೆ ಮರಿಯೊಂದಕ್ಕೆ ನಾಮಕರಣ ಮಾಡಿ ಪ್ರತಿದಿನ ಆನೆಗಳನ್ನು ಸಾಕಿ ಸಲಹಿದಂತಹ ಮಾವುತರ ಮಕ್ಕಳ ಕೈನಲ್ಲಿ ಮಣ್ಣಿನಿಂದ ಎಲ್ಲಾ ರೀತಿಯ ಪ್ರಾಣಿಗಳನ್ನು ಮಾಡಿಸಲಾಗಿದೆ. ಅವುಗಳನ್ನು ಸಾರ್ವಜನಿಕರ ಪ್ರದರ್ಶನಕ್ಕಿಡುವ ಮೂಲಕ ವಿನೂತನವಾಗಿ ಅಂತರಾಷ್ಟ್ರೀಯ ಆನೆಗಳ ದಿನಾಚರಣೆಯನ್ನು ಆಚರಿಸಲಾಗಿದೆ.
ಬೆಂಗಳೂರು ಹೊರವಲಯ ಬನ್ನೇರುಘಟ್ಟ ಬಯೋಲಾಜಿಕಲ್ ಪಾರ್ಕ್ ನಲ್ಲಿ ಅಂತರಾಷ್ಟ್ರೀಯ ಆನೆಗಳ ದಿನವನ್ನು ಅದ್ದೂರಿಯಾಗಿ ಆಚರಣೆ ಮಾಡಲಾಗಿದೆ. ಮಾವುತರ ಮಕ್ಕಳ ಕೈನಿಂದ ಬಿದಿರಿನ ವಸ್ತುಗಳನ್ನು, ಮಣ್ಣಿನಿಂದ ಮಾಡಿದ ಆನೆ, ಮೊಸಳೆ ಸೇರಿದಂತೆ ವಿವಿಧ ಪ್ರಾಣಿಗಳನ್ನು ಸಾರ್ವಜನಿಕರ ಪ್ರದರ್ಶನಕ್ಕಿಟ್ಟು ಪ್ಲಾಸ್ಟಿಕ್ ವಸ್ತುಗಳನ್ನು ಬಳಸಬೇಡಿ ಎಂಬ ಸಂದೇಶವನ್ನು ಪ್ರವಾಸಿಗರಿಗೆ ರವಾನೆ ಮಾಡಿದರು.
ಬನ್ನೇರುಘಟ್ಟ ಬಯೋಲಾಜಿಕಲ್ ಪಾರ್ಕ್ ನಲ್ಲಿ 22 ಆನೆಗಳಿದ್ದು, ಅದರಲ್ಲಿನ ಒಂದು ಮರಿಗೆ ಸಾರ್ವಜನಿಕರು ಹಾಗೂ ಪ್ರವಾಸಿಗರು ಸೂಚಿಸಿದ ಕೆಲವು ಹೆಸರುಗಳನ್ನು ತೆಗೆದುಕೊಂಡು ಒಂದು ಹೆಣ್ಣು ಮಗುವಿನ ಕೈನಲ್ಲಿ ಆ ಚೀಟಿಯನ್ನು ತೆಗೆಸಿಕೊಳ್ಳುವ ಮೂಲಕ ಆನೆ ಮರಿಗೆ ‘ಶೃತಿ’ ಎಂಬ ಹೆಸರನ್ನು ಇಡಲಾಗಿದೆ ಎಂದು ಬನ್ನೇರುಘಟ್ಟ ಬಯೋಲಾಜಿಕಲ್ ಪಾರ್ಕ್ನ ಇಡಿ ವನಶ್ರೀ ತಿಳಿಸಿದ್ರು.