ವಿಧಾನಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ತಮ್ಮ ಮನೆಯಲ್ಲಿ ಯಾಕೆ ನೋಟು ಎಣಿಸುವ ಮಷಿನ್ ಇಟ್ಟುಕೊಂಡಿದ್ದಾರೆ ಎನ್ನುವುದು ನಮಗೆ ಗೊತ್ತಿದೆ ಎಂದು ಜಲಸಂಪನ್ಮೂಲ ಖಾತೆ ಸಚಿವ ಎಂ.ಬಿ.ಪಾಟೀಲ್ ವಾಗ್ದಾಳಿ ನಡೆಸಿದ್ದಾರೆ.
ನಂಜನಗೂಡು ಉಪಚುನಾವಣೆ ಪ್ರಚಾರದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಒಂದು ವೋಟಿಗೆ ನಾಲ್ಕು ಸಾವಿರ ರೂಪಾಯಿ ನೀಡುತ್ತಿದೆ ಎಂದು ಆರೋಪಿಸಿದ್ದಾರೆ. ಅವರ ಆರೋಪದಲ್ಲಿ ಯಾವುದೇ ಸತ್ಯಾಂಶವಿಲ್ಲ. ತಮ್ಮ ಉದ್ದೇಶವನ್ನು ಹೇಳಲು ಪ್ರಯತ್ನಿಸಿರಬಹುದು ಎಂದು ತಿರುಗೇಟು ನೀಡಿದ್ದಾರೆ.
ಮನೆಯಲ್ಲಿ ನೋಟು ಎಣಿಸುವ ಮಷಿನ್ನಿಂದ ಒಂದು ವೋಟಿಗೆ ನಾಲ್ಕು ಸಾವಿರ ರೂಪಾಯಿಗಳಂತೆ ಲೆಕ್ಕ ಮಾಡಿ ಹಣ ಹಂಚುತ್ತಿರಬಹುದು ಎಂದು ಲೇವಡಿ ಮಾಡಿದರು.
ಸಿಎಂ ಸಿದ್ದರಾಮಯ್ಯ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದ ದಿನದಿಂದ ಜನಪರ ಅಭಿವೃದ್ಧಿ ಕಾರ್ಯಗಳನ್ನು ಕಾಯಕವಾಗಿಸಿಕೊಂಡಿದೆ. ಆದ್ದರಿಂದ, ಕಾಂಗ್ರೆಸ್ ಪಕ್ಷಕ್ಕೆ ಮತದಾರರಿಗೆ ಹಣ ನೀಡುವ ಅಗತ್ಯವಿಲ್ಲ. ಆದರೆ, ವಿಪಕ್ಷವಾಗಿ ಸರಿಯಾಗಿ ಹೊಣೆಯನ್ನು ನಿಭಾಯಿಸದಿರುವುದರಿಂದ ಬಿಜೆಪಿ ಮತದಾರರಿಗೆ ಹಣದ ಆಮಿಷವೊಡ್ಡುತ್ತಿರಬಹುದು ಎಂದು ಸಚಿವ ಪಾಟೀಲ್ ಕಿಡಿಕಾರಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.