ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ರಾಜೀನಾಮೆಯಿಂದ ಜೆಡಿಎಸ್ ಪಕ್ಷಕ್ಕಾಗುವ ಲಾಭದ ಕುರಿತು ಚರ್ಚಿಸಿಲ್ಲ. ನಮ್ಮ ಪಕ್ಷಕ್ಕೆ ತನ್ನದೇ ಆದ ಶಕ್ತಿ ಇದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಸ್.ಎಂ.ಕೃಷ್ಣ ರಾಜೀನಾಮೆಯಿಂದ ಕಾಂಗ್ರೆಸ್ ಯಾವ ಹಂತಕ್ಕೆ ತಲುಪುತ್ತದೆ ಎನ್ನುವುದನ್ನು ಕಾದು ನೋಡೋಣ. ಹಳೇ ಮೈಸೂರು ಭಾಗದ ಜನತೆ ಬದಲಾವಣೆಯನ್ನು ಬಯಸಿದ್ದು, ಜೆಡಿಎಸ್ ಪಕ್ಷಕ್ಕೆ ಒಲವು ತೋರಿಸಿದ್ದಾರೆ. ಉತ್ತರ ಕರ್ನಾಟಕ ಭಾಗದಲ್ಲಿಯೂ ಸಹ ಜೆಡಿಎಸ್ ಪರ ಅಲೆ ಇದೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ 40 ರಿಂದ 50 ಸ್ಥಾನಗಳಲ್ಲಿ ಜೆಡಿಎಸ್ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಜೆಡಿಎಸ್ ವಿರುದ್ಧ ಬಂಡಾಯ ಎದ್ದಿರುವ ಶಾಸಕರ ಕುರಿತು ಚರ್ಚೆ ಬೇಡ. ಈಗಾಗಲೇ ಅವರು ಬಹಳ ದೂರ ಸಾಗಿದ್ದಾರೆ. ಪಿ.ಜಿ.ಆರ್.ಸಿಂಧ್ಯಾ, ಎಂ.ಸಿ.ನಾಣಯ್ಯ ಅವರು ಜನತಾ ಪರಿವಾರದ ನಾಯಕರು, ಅವರು ಜೆಡಿಎಸ್ ಪಕ್ಷಕ್ಕೆ ಬಂದರೇ ಸ್ವಾಗತಿಸುತ್ತೇವೆ ಎಂದರು.
ಕಂಬಳ ದಕ್ಷಿಣ ಕನ್ನಡ ಭಾಗದ ಗ್ರಾಮೀಣ ಕ್ರೀಡೆ. ತಮಿಳುನಾಡಿನ ಜಲ್ಲಿಕಟ್ಟು ಕ್ರೀಡೆಯಷ್ಟು ಕಂಬಳ ಅಪಾಯಕಾರಿ ಕ್ರೀಡೆಯಲ್ಲ. ಈ ಕೂಡಲೇ ಕೇಂದ್ರ ಸರಕಾರ ಕಂಬಳಕ್ಕೂ ಅವಕಾಶ ನೀಡಬೇಕೆಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಆಗ್ರಹಿಸಿದರು.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ