ಬೆಂಗಳೂರು : ಪಕ್ಷಾಂತರ ಚಟುವಟಿಕೆ ನಡೆಸಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ನ ಮೂವರು ಶಾಸಕರಾದರಾಣೇಬೆನ್ನೂರು ಶಾಸಕ ಆರ್.ಶಂಕರ್, ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ, ಅಥಣಿ ಶಾಸಕ ಮಹೇಶ್ ಕುಮಟಳ್ಳಿಯವರನ್ನು ಸ್ಪೀಕರ್ ರಮೇಶ್ ಕುಮಾರ್ ನಿನ್ನೆ ಅನರ್ಹಗೊಳಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಜೆಡಿಎಸ್ ನ ಅತೃಪ್ತ ಶಾಸಕ ಹೆಚ್. ವಿಶ್ವನಾಥ್, ನಾವ್ಯಾರು ಕಾಲೇಜು ಹುಡುಗರಲ್ಲ, ಅನರ್ಹತೆಗೆ ಹೆದರುವುದಿಲ್ಲ. ನಾವೆಲ್ಲರೂ ಸಾಕಷ್ಟು ಅನುಭವಿಗಳು. ಹೀಗಾಗಿ ಭಯ ಪಡುವುದಿಲ್ಲ ಎಂದು ಹೇಳಿದ್ದಾರೆ.
ರಾಜಕೀಯದಲ್ಲಿ ಇಂತಹ ಸಾಕಷ್ಟು ಪ್ರಕರಣಗಳನ್ನು ಕಂಡಿದ್ದೇವೆ. ಎರಡು-ಮೂರು ದಿನಗಳಲ್ಲಿ ನಾವೆಲ್ಲರೂ ಬೆಂಗಳೂರಿಗೆ ಬರುತ್ತೇವೆ. ಅನರ್ಹತೆ ವಿಚಾರವನ್ನು ಸುಪ್ರೀಂಕೋರ್ಟ್ ನಲ್ಲಿ ಪ್ರಶ್ನಿಸುತ್ತೇವೆ ಎಂದು ಅವರು ತಿಳಿಸಿದ್ದಾರೆ.