ಲೋಕಸಭಾ ಸದಸ್ಯರಾದ ಡಾ. ಮಲ್ಲಿಕಾರ್ಜುನ ಖರ್ಗೆ ಅಧ್ಯಕ್ಷತೆಯ ಸಾರ್ವಜನಿಕ ಲೆಕ್ಕಪತ್ರ ಸಮಿತಿಯು ನವೆಂಬರ್ 27 ಹಾಗೂ 28 ರಂದು ಬಿಸಿಲೂರು ಖ್ಯಾತಿಯ ಜಿಲ್ಲೆಗೆ ಭೇಟಿ ನೀಡಲಿದೆ.
ಸಾರ್ವಜನಿಕ ಲೆಕ್ಕಪತ್ರ ಸಮಿತಿಯು ನವೆಂಬರ್ 27ರಂದು ಮಧ್ಯಾಹ್ನ 12 ಗಂಟೆಗೆ ಹೈದ್ರಾಬಾದ್ ಮೂಲಕ ಕಲಬುರಗಿಗೆ ಆಗಮಿಸಲಿದೆ. ಅಂದು ಮಧ್ಯಾಹ್ನ 3 ಗಂಟೆಗೆ ಕಲಬುರಗಿ ಇ.ಎಸ್.ಐ.ಸಿ. ಆಸ್ಪತ್ರೆಗೆ ಭೇಟಿ ನೀಡಿ ಪ್ರಧಾನಮಂತ್ರಿ ಸ್ವಾಸ್ಥ್ಯ ಸುರಕ್ಷಾ ಯೋಜನೆ ಪ್ರಗತಿ ಕುರಿತಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಕಾರ್ಮಿಕ ಮತ್ತು ಉದ್ಯೋಗ ಮಂತ್ರಾಲಯದ ಅಧಿಕಾರಿಗಳೊಂದಿಗೆ ಅನೌಪಚಾರಿಕ ಚರ್ಚೆ ನಡೆಸುವರು.
ಅಂದು ಸಂಜೆ 4 ಗಂಟೆಗೆ ಕಲಬುರಗಿ ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿ ನಾಗರಿಕ ವಿಮಾನಯಾನ ಸಚಿವಾಲಯದ ಅಧಿಕಾರಿಗಳೊಂದಿಗೆ ವಿಮಾನಯಾನ ಸಂಚಾರ ಆರಂಭಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ನಂತರ ಸಂಜೆ 5.30 ಗಂಟೆಗೆ ಕಲಬುರಗಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡುವರು. ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಅಧಿಕಾರಿಗಳು ಹಾಗೂ ವಿಶ್ವವಿದ್ಯಾಲಯದ ಕುಲಪತಿಗಳೊಂದಿಗೆ ಅನೌಪಚಾರಿಕ ಚರ್ಚಿಸಿ ಕಲಬುರಗಿಯಲ್ಲಿ ವಾಸ್ತವ್ಯ ಮಾಡುವರು.
ನವೆಂಬರ್ 28ರಂದು ಬೆಳಿಗ್ಗೆ 10 ಗಂಟೆಗೆ ಹಣಕಾಸು ಸಚಿವಾಲಯದ ಅಧಿಕಾರಿಗಳು ಹಾಗೂ ವಿವಿಧ ಬ್ಯಾಂಕಿನ ಮುಖ್ಯಸ್ಥರೊಂದಿಗೆ ವಿಶೇಷವಾಗಿ ಕರ್ನಾಟಕಕ್ಕೆ ಸಂಬಂಧಿಸಿದಂತೆ ಚರ್ಚೆ ನಡೆಸಿ ನಂತರ ಬೆಳಿಗ್ಗೆ 11.30 ಗಂಟೆಗೆ ಕಲಬುರಗಿ ರೈಲ್ವೆ ನಿಲ್ದಾಣಕ್ಕೆ ಭೇಟಿ ನೀಡಿ ರೈಲ್ವೆ ಮಂತ್ರಾಲಯದ ಅಧಿಕಾರಿಗಳು ಹಾಗೂ ವಿವಿಧ ವಲಯದ ಜನರಲ್ ಮ್ಯಾನೇಜರ್‍ಗಳೊಂದಿಗೆ ಭಾರತೀಯ ರೈಲ್ವೆಯಲ್ಲಿ ಕ್ಯಾಟರಿಂಗ್ ಸೇವೆ ಕುರಿತು ಚರ್ಚಿಸುವರು.