ಬೆಂಗಳೂರು: ಉದ್ಯಮಿ ಆದಿಕೇಶವುಲು ಮೊಮ್ಮಗ ವಿಷ್ಣು ಎಸ್ಕೇಪ್ ಪ್ರಕರಣಕ್ಕೆ ಮೇಜರ್ ಟ್ವಿಸ್ಟ್ ಸಿಕ್ಕಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ವಿಷ್ಣು ಭಾವ ರಾಜೇಶ್ ನಾಯ್ಡುನನ್ನು ಬಂಧಿಸಿರುವುದಾಗಿ ದಕ್ಷಿಣ ವಿಭಾಗ ಡಿಸಿಪಿ ಡಾ.ಶರಣಪ್ಪ ಹೇಳಿದ್ದಾರೆ.
ವಿಷ್ಣು ಭಾವ ರಾಜೇಶ್ ನಾಯ್ಡು
ವಿಷ್ಣು ಎಸ್ಕೇಪ್ ಆಗಲು ಸಹಾಯ ಮಾಡಿದ್ದ ಆರೋಪದ ಮೇಲೆ ರಾಜೇಶ್ ನಾಯ್ಡುನನ್ನು ಜಯನಗರ ಪೊಲೀಸರು ಬಂಧಿಸಿದ್ದಾರೆ. ಸೆ. 28ರಂದು ಮಲ್ಯ ಆಸ್ಪತ್ರೆಗೆ ದಾಖಲಾಗಿದ್ದ ವಿಷ್ಣು, ಸೆ. 29ರಂದು ಮುಂಜಾನೆ 6:30ರ ಸುಮಾರಿಗೆ ಫೈರ್ ಎಕ್ಸಿಟ್ ಮೂಲಕ ಎಸ್ಕೇಪ್ ಆಗಿದ್ದ. ವಿಷ್ಣುಗಾಗಿ ಹುಡುಕಾಡಿದ್ದ ಪೊಲೀಸರಿಗೆ ಸಿಸಿಟಿವಿ ಫೂಟೇಜ್ ವಶಕ್ಕೆ ಪಡಿದಾಗ ಸುಳಿವು ನೀಡಿದೆ. ಎಸ್ಕೇಪ್ ಗೆ ಆತನ ಸಹೋದರಿ ಚೈತನ್ಯ ಮತ್ತು ಭಾವ ರಾಜೇಶ್ ನಾಯ್ಡು ಸಹಾಯ ಮಾಡಿರುವುದು ಸೆರೆಯಾಗಿದೆ.
ಡಾ.ಶರಣಪ್ಪ, ಡಿಸಿಪಿ, ಬೆಂಗಳೂರು ದಕ್ಷಿಣ ವಿಭಾಗ
ವಿಷ್ಣುವಿನ ಬಂಧನಕ್ಕಾಗಿ 4 ತಂಡಗಳನ್ನು ರಚಿಸಲಾಗಿದ್ದು, ಪರಾರಿಯಾಗಲು ಯತ್ನಿಸಿದ ರಾಜೇಶ್ ನನ್ನು ಬೆಂಗಳೂರಿನ ಅಪಾರ್ಟಮೆಂಟ್ ನಲ್ಲಿ ಬಂಧಿಸಲಾಗಿದೆ. ಸಿಸಿಟಿವಿ ದೃಶ್ಯಾವಳಿ ಆಧರಿಸಿ ರಾಜೇಶ್ ನಾಯ್ಡು ದಸ್ತಗಿರಿ ಮಾಡಲಾಗಿದೆ. ಆಸ್ಪತ್ರೆಯಿಂದ ತಪ್ಪಿಸಿಕೊಂಡಿದ್ದ ವಿಷ್ಣುಗೆ ವಿನೋದ್ ಬಾಬು ಎಂಬುವವ ಸಹಕರಿಸಿದ್ದ. ಆಸ್ಪತ್ರೆ ವೈದ್ಯರು ಪ್ರಕರಣದ ತನಿಖೆಗೆ ಸಹಕರಿಸುತ್ತಿಲ್ಲ. ಹೀಗಾಗಿ ಈ ವಿಚಾರವಾಗಿ ಮೆಡಿಕಲ್ ಬೋರ್ಡ್ ಗೆ ದೂರು ನೀಡಿದ್ದೇವೆ.
ವಿಷ್ಣು ಜೊತೆಗೆ ಆತನ ಅಕ್ಕ ಚೈತನ್ಯ ಕೂಡ ತಲೆಮರೆಸಿಕೊಂಡಿದ್ದಾರೆ. ಸದ್ಯ ತಲೆ ಮರೆಸಿಕೊಂಡಿರುವ ವಿಷ್ಣು, ವಿನೋದ್ ಬಾಬು ಮತ್ತು ವಿಷ್ಣು ಅಕ್ಕ ಚೈತನ್ಯಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.