ಚಿಕ್ಕಮಗಳೂರು ಜ.೭ ಕಸದ ವಿಲೇವಾರಿ ಗುಂಡಿಯನ್ನು ಗ್ರಾಮದಿಂದ ದೂರದ ಜಾಗದಲ್ಲಿ ತೆಗೆಯುವಂತೆ ಒತ್ತಾಯಿಸಿ ಹಲಸುಮನೆ ಗ್ರಾಮಸ್ಥರು ತಾಲ್ಲೂಕಿನ ಬಸ್ಕಲ್ ಗ್ರಾಮ ಪಂಚಾಯಿತಿ ಎದುರು ಶನಿವಾರ ಪ್ರತಿಭಟನೆ ನಡೆಸಿದರು.
ಗ್ರಾಮ ಪಂಚಾಯಿತಿ ಎದುರು ಜಮಾಯಿಸಿದ ಗ್ರಾಮಸ್ಥರು ಕಸದ ವಿಲೇವಾರಿ ಗುಂಡಿಯನ್ನು ಗ್ರಾಮದ ಮುಂಭಾಗದ ರಸ್ತೆಯಲ್ಲೇ ತೆಗೆಯಲು ಮುಂದಾಗಿರುವುದರ ವಿರುದ್ದ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮದ ಮುಂಭಾಗದ ರಸ್ತೆಯಲ್ಲಿ ಕಸದ ಗುಂಡಿಯನ್ನು ಮಾಡುವುದರಿಂದ ದುರ್ವಾಸನೆ ಬೀರುತ್ತದೆ, ಗ್ರಾಮದಲ್ಲಿ ಸಾಂಕ್ರಾಮಿಕ ರೋಗಗಳು ಹರಡುತ್ತವೆ ಎಂದು ಆತಂಕ ವ್ಯಕ್ತಪಡಿಸಿದರು.ಗ್ರಾಮದ ಮುಂಭಾಗದಲ್ಲಿ ಗುಂಡಿಯನ್ನು ತೋಡದಂತೆ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ೩-೪ ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ, ಗ್ರಾಮ ಪಂಚಾಯಿತಿ ರಾತ್ರೋರಾತ್ರಿ ಗುಂಡಿ ತೆಗೆಯುವ ಕಾರ್ಯ ಆರಂಭಿಸಿದೆ ಎಂದು ಆರೋಪಿಸಿದರು.ಗ್ರಾಮದ ಮುಂಭಾಗ ಗುಂಡಿ ತೋಡುವ ಕೆಲಸವನ್ನು ಕೈಬಿಟ್ಟು ಹಳ್ಳಿಯಿಂದ ದೂರದ ಸ್ಥಳದಲ್ಲಿ ನಿರ್ಮಿಸಬೇಕು ಎಂದು ಆಗ್ರಹಿಸಿದರು.ಗ್ರಾಮದ ಮುಖಂಡರಾದ ಅರೇನಳ್ಳಿ ಪ್ರಕಾಶ್, ಪ್ರವೀಣ್, ಲೋಕೇಶ್, ವೇಣು, ಧರ್ಮೇಶ್, ಸುರೇಶ್, ಕಲ್ಲೇಗೌಡ, ರವಿ, ತೀರ್ಥನಾಥ್ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.