ಮೈಸೂರು: ನಾಳೆ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ನಡೆಯಲಿದೆ. ಪ್ರಮುಖ ಆಕರ್ಷಣೆ ಸವಾರಿ ಸಹ ನಾಳೆಯೇ ನಡೆಯಲಿದೆ. ಆದರೆ ಈ ಬಾರಿ ಪಾರಂಪರಿಕ ಕಟ್ಟಡದ ಮೇಲಿಂದ ಮೆರವಣಿಗೆ ವೀಕ್ಷಣೆಗೆ ಅವಕಾಶ ನಿಷೇಧಿಸಲಾಗಿದೆ.
ಹೌದು.. ನಾಳೆ ವಿಜೃಂಭಣೆಯಿಂದ ನಡೆಯಲಿರುವ ಜಂಬೂಸವಾರಿಯನ್ನ ನೋಡೋಕೆ ಲಕ್ಷಾಂತರ ಜನ ಮೈಸೂರಿನಲ್ಲಿ ಸೇರಲಿದ್ದಾರೆ. ಕಿಕ್ಕಿರಿದು ಸೇರುವ ಜನಸಾಗರ ಮೆರವಣಿಗೆ ಸಾಗುವ ರಸ್ತೆ ಪಕ್ಕದಲ್ಲಿಯೇ ಇರುವ ಹಳೆ ಕಟ್ಟಡಗಳ ಮೇಲೇರುವುದು ಸಾಮಾನ್ಯ ಆದರೆ ಈ ಬಾರಿ ಅದಕ್ಕೆ ಬ್ರೇಕ್ ಹಾಕಿದ್ದಾರೆ. ಮೈಸೂರಿನಲ್ಲಿ ಭಾರೀ ಮಳೆಯಾಗುತ್ತಿದ್ದು, ಹಳೆಯ ಕಟ್ಟಡಗಳು ದುರ್ಬಲವಾಗಿರುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಈ ಆದೇಶ ನೀಡಲಾಗಿದೆ ಎಂದು ಮೈಸೂರು ಮಹಾನಗರ ಪಾಲಿಕೆ ಆಯುಕ್ತರು ತಿಳಿಸಿದ್ದಾರೆ.
ಮೆರವಣಿಗೆ ಸಯ್ಯಾಜಿರಾವ್ ರಸ್ತೆ ಮೂಲಕ ಸಾಗಲಿದ್ದು, ರಸ್ತೆಯ ಎರಡೂ ಬದಿಯಲ್ಲಿ ಹಲವು ಪುರಾತನ ಕಟ್ಟಡಗಳಿವೆ. ಯಾವುದೇ ಅಹಿತಕರ ಘಟನೆ ನಡೆಯದಿರಲಿ ಎಂಬ ದೃಷ್ಟಿಯಿಂದ ಕಟ್ಟಡ ಹತ್ತುವುದನ್ನು ನಿಷೇಧಿಸಿ ಆದೇಶ ಹೊರಡಿಸಲಾಗಿದೆ.