ಬೆಂಗಳೂರು: ಬಿಜೆಪಿ ಲೋಕಸಭೆ ಚುನಾವಣೆಗೆ ಕರ್ನಾಟಕದಲ್ಲಿ ಐದು ಕ್ಷೇತ್ರಗಳನ್ನು ಬಿಟ್ಟು ಉಳಿದ ಕಡೆಗೆ ಅಭ್ಯರ್ಥಿಗಳ ಘೋಷಣೆ ಮಾಡಿದೆ. ಆದರೆ ಘೋಷಣೆ ಮಾಡದ ಕ್ಷೇತ್ರಗಳ ಪೈಕಿ ಉತ್ತರ ಕನ್ನಡ ಕ್ಷೇತ್ರ ಯಾರಿಗೆ ಕೊಡಬೇಕು ಎಂಬ ಬಗ್ಗೆ ಭಾರೀ ಚರ್ಚೆಯಾಗುತ್ತಿದೆ.
ಉತ್ತರ ಕನ್ನಡ ಕ್ಷೇತ್ರದಲ್ಲಿ ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತು ಅನಂತ್ ಕುಮಾರ್ ಹೆಗಡೆ ನಡುವೆ ಪೈಪೋಟಿಯಿದೆ. ಈ ಇಬ್ಬರ ಪೈಕಿ ಯಾರಿಗೆ ಕೊಡಬೇಕು ಎಂಬ ಬಗ್ಗೆ ಈಗ ಬಿಜೆಪಿ ನಾಯಕರಲ್ಲಿ ಭಾರೀ ಚರ್ಚೆ ನಡೆದಿದೆ. ಅನಂತ್ ಕುಮಾರ್ ಹೆಗಡೆ ಉತ್ತರ ಕನ್ನಡದ ಹಾಲಿ ಸಂಸದ. ಅವರಿಗೆ ಈ ಬಾರಿ ಟಿಕೆಟ್ ಸಿಗುವುದು ಅನುಮಾನ ಎನ್ನಲಾಗಿದೆ.
ಸದಾ ವಿವಾದಾತ್ಮಕ ಹೇಳಿಕೆಗಳಿಂದ ಸುದ್ದಿಯಾಗುವ ಅನಂತ್ ಕುಮಾರ್ ಹೆಗಡೆ ಬಗ್ಗೆ ಈಗ ಪಕ್ಷದಲ್ಲೇ ಅಸಮಾಧಾನ ಮೂಡಿದೆ. ಇಷ್ಟು ದಿನ ಸ್ವಕ್ಷೇತ್ರದಲ್ಲಿ ಕೆಲಸ ಮಾಡದೇ ಈಗ ಚುನಾವಣೆ ಸಂದರ್ಭದಲ್ಲಿ ವಿವಾದಾತ್ಮಕ ಹೇಳಿಕೆಗಳಿಂದ ಸುದ್ದಿಯಾಗುತ್ತಿದ್ದಾರೆ ಎಂದು ಅಸಮಾಧಾನವಿದೆ. ಹಾಗಿದ್ದರೂ ಚುನಾವಣೆ ಸಮಯದಲ್ಲಿ ಯಾವುದೇ ಪ್ರಯೋಗ ಮಾಡಲೂ ನಾಯಕರು ಹಿಂದೇಟು ಹಾಕುತ್ತಿದ್ದಾರೆ.
ಇನ್ನೊಂದೆಡೆ ಮಾಜಿ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಜೊತೆಗೂ ಮಾತುಕತೆ ನಡೆದಿದೆ. ಕಾಗೇರಿ ಕೂಡಾ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಆದರೆ ಇಬ್ಬರಲ್ಲಿ ಯಾರಿಗೆ ಮಣೆ ಹಾಕುವುದು ಎಂಬ ಜಿಜ್ಞಾಸೆ ಬಿಜೆಪಿ ನಾಯಕರಲ್ಲಿದೆ. ಇದೆಲ್ಲದರ ನಡುವೆ ಅನಂತ್ ಕುಮಾರ್ ಹೆಗಡೆ ತಮ್ಮ ಪಾಡಿಗೆ ತಾವು ಪ್ರಚಾರ ಕೆಲಸ ಶುರು ಮಾಡಿಯೇಬಿಟ್ಟಿದ್ದಾರೆ.